ದೆಹಲಿ:- ದೆಹಲಿಯಲ್ಲಿ ಇಡಿ ಅಧಿಕಾರಿಗಳಿಂದ ಕೆ.ಕವಿತಾ ಅರೆಸ್ಟ್ ಮಾಡಲಾಗಿದೆ, ಮದ್ಯ ಹಗರಣ ಪ್ರಕರಣದಲ್ಲಿ ಬಿಆರ್ಎಸ್ ಎಂಎಲ್ಸಿ ಹಾಗೂ ಕೆಸಿಆರ್ ಪುತ್ರಿ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ಬಂಧಿಸಿದೆ.
ಬಂಧನಕ್ಕೆ ಮುನ್ನ ಪ್ರಸ್ತುತ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ನಲ್ಲಿರುವ ಕವಿತಾ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಏಜೆನ್ಸಿ ನೀಡಿದ ಹಲವಾರು ಸಮನ್ಸ್ಗಳಿಗೆ ಗೈರು ಹಾಜರಾದ ನಂತರ ಇಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಕವಿತಾ ಅವರು ತೆಲಂಗಾಣದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ. ಈಕೆ ಭಾರತ್ ರಾಷ್ಟ್ರ ಸಮಿತಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿಯಾಗಿದ್ದಾರೆ. ಈ ಪ್ರಕರಣದಲ್ಲಿ ಕವಿತಾ ಅವರನ್ನು ಈ ಹಿಂದೆ ವಿಚಾರಣೆಗೊಳಪಡಿಸಿದ್ದರೂ, ಈ ವರ್ಷ ಅವರು ಎರಡು ಸಮನ್ಸ್ಗಳಿಗೆ ಹಾಜರಾಗಿರಲಿಲ್ಲ.
ಬಂಜಾರ ಹಿಲ್ಸ್ನ ಆಕೆಯ ನಿವಾಸದಲ್ಲಿ ಇಡಿ ತಂಡ ಶೋಧ ನಡೆಸಿದ್ದರಿಂದ ಯಾರನ್ನೂ ಒಳಗೆ ಬಿಡಲಾಗುತ್ತಿಲ್ಲ. ಶೋಧ ಕಾರ್ಯ ಯಾವಾಗ ಪ್ರಾರಂಭವಾಯಿತು ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಆದರೆ ಮಧ್ಯಾಹ್ನ ಆಕೆಯ ನಿವಾಸದಲ್ಲಿ ಇಡಿ ಅಧಿಕಾರಿಗಳ ಉಪಸ್ಥಿತಿಯ ಬಗ್ಗೆ ಮಾಧ್ಯಮಗಳಿಗೆ ಗೊತ್ತಾಗಿದೆ.
ಈ ಹಿಂದೆ ಮಾಜಿ ಸಂಸದೆ ಕವಿತಾ ಅವರನ್ನು ಇಡಿ ವಿಚಾರಣೆ ನಡೆಸಿತ್ತು. ಆದರೆ, ಸಮನ್ಸ್ ನೀಡಿದರೂ ಕಳೆದ ವರ್ಷ ಅಕ್ಟೋಬರ್ನಿಂದ ಆಕೆ ಏಜೆನ್ಸಿಯ ಮುಂದೆ ಹಾಜರಾಗಿರಲಿಲ್ಲ. ಮಹಿಳೆಯೊಬ್ಬರನ್ನು ಇಡಿ ತನ್ನ ಕಚೇರಿಗೆ ಕರೆಸಿರುವುದನ್ನು ಪ್ರಶ್ನಿಸಿ ಕವಿತಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.