ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಇಂದಿನಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿತಗೊಳಿಸಿವೆ. ಲೋಕಸಭೆ ಚುನಾವಣೆ ಹೊತ್ತಲ್ಲೇ ತೈಲ ಬೆಲೆ ಇಳಿಕೆ ಮಾಡಿರುವುದು ಜನರಿಗೆ ನೆಮ್ಮದಿ ಮೂಡಿಸಿದೆ.
ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡಿಸೆಲ್ ಬೆಲೆಯಲ್ಲಿ 2 ರೂಪಾಯಿ ಕಡಿತಗೊಳಿಸಿವೆ. ಈ ತಿಂಗಳ ಆರಂಭದಲ್ಲಿ ಅಡುಗೆ ಅನಿಲ ದರವನ್ನು ಕಡಿತ ಮಾಡಿ ಜನಸಾಮಾನ್ಯರಿಗೆ ಸಿಹಿ ಸುದ್ದಿ ನೀಡಿದ್ದ ಕೇಂದ್ರ ಸರ್ಕಾರ ಇದೀಗ ತೈಲ ಬೆಲೆಯನ್ನು ಇಳಿಸಿ ಮತ್ತಷ್ಟು ಖುಷಿ ನೀಡಿದೆ.
ಲೋಕಸಭೆ ಚುನಾವಣಾ ಸಮೀಪದಲ್ಲಿ ಅಡುಗೆ ಅನಿಲ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಇಳಿಕೆ ಮಾಡಿರುವುದು ಗಮನಾರ್ಹವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕಡಿತ ಮಾಡುತ್ತಿರುವ ಸುದ್ದಿಯನ್ನು ಪೆಟ್ರೋಲಿಯಂ ಸಚಿವಾಲಯ ತನ್ನ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದೆ.
ಸಾಕಷ್ಟು ಸಮಯದ ಬಳಿಕ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿಗಿಂತ ಕೆಳಗಿಳಿದಿದೆ. ಇಂದು ನಗರದಲ್ಲಿ ಪೆಟ್ರೋಲ್ ಬೆಲೆ 99.84 ರೂಪಾಯಿ ಇದೆ. ನಿನ್ನೆ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 101.94 ರೂಪಾಯಿ ಇತ್ತು. ಅದೇ ರೀತಿಯಲ್ಲಿ ಪ್ರತಿ ಲೀಟರ್ ಬೆಲೆಯಲ್ಲಿ 2 ರೂಪಾಯಿ ಇಳಿಕೆ ಬಳಿಕ ಪ್ರಸ್ತುತ ಡೀಸೆಲ್ ಬೆಲೆ 85.93 ರೂಪಾಯಿಗೆ ತಗ್ಗಿದೆ. ಕಳೆದ 10 ದಿನಗಳಿಂದ ಈ ಬೆಲೆ 87.89 ರೂಪಾಯಿ ಇತ್ತು.
ದೆಹಲಿಯಲ್ಲಿ ದರ ಶುಕ್ರವಾರದಂದು ಪೆಟ್ರೋಲ್ ಪ್ರತಿ ಲೀಟರ್ಗೆ 94.72 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರ್ಗೆ 87.62 ರೂಪಾಯಿ ಆಗಿದೆ. ಸ್ಥಳೀಯ ಸುಂಕಗಳಲ್ಲಿನ ವ್ಯತ್ಯಾಸಗಳಿಂದಾಗಿ ದರಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ. ಆದಾಗ್ಯೂ, ತೈಲ ಮಾರುಕಟ್ಟೆ ಕಂಪನಿಗಳು ಇಂಧನ ದರಗಳನ್ನು ಪರಿಷ್ಕರಿಸುವ ಕ್ರಮದ ಬಗ್ಗೆ ಮಾಹಿತಿ ನೀಡಿವೆ ಎಂದು ಸಚಿವಾಲಯ ತಿಳಿಸಿದೆ.