ನವದೆಹಲಿ: ಎಲೆಕ್ಟೊರಲ್ ಬಾಂಡ್ಗಳ ಮಾರಾಟ ಹಾಗೂ ಸ್ವೀಕೃತಿಯ ಕುರಿತಂತೆ ಭಾರತೀಯ ಸ್ಟೇಟ್ ಬ್ಯಾಂಕ್ ನೀಡಿರುವ ದಾಖಲೆಗಳನ್ನು ಚುನಾವಣಾ ಆಯೋಗವು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಈ ಎಲ್ಲಾ ಮಾಹಿತಿಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಲಾಗಿದೆ. ಮಾಹಿತಿಯ ಬಹಿರಂಗ ಹಾಗೂ ಪಾರದರ್ಶಕತೆಯ ಪರವಾಗಿ ತಾನು ನಿರಂತರ ಹಾಗೂ ಬೇಷರತ್ತಾಗಿ ಬೆಂಬಲ ಸೂಚಿಸಿರುವುದಾಗಿ ಹೇಳಿರುವ ಚುನಾವಣಾ ಆಯೋಗ, ತನ್ನ ಈ ನಿಲುವು ಸುಪ್ರೀಂ ಕೋರ್ಟ್ನ ವಿಚಾರಣಾ ಪ್ರಕ್ರಿಯೆಗಳಲ್ಲಿ ಪ್ರತಿಫಲಿತವಾಗಿದ್ದು, ಅದು ತನ್ನ ಆದೇಶದಲ್ಲಿ ಕೂಡ ಈ ಬಗ್ಗೆ ಉಲ್ಲೇಖ ಮಾಡಿದೆ ಎಂದು ಹೇಳಿಕೊಂಡಿದೆ.
2019ರ ಏಪ್ರಿಲ್ 12ರಿಂದ ಕಂಪೆನಿಗಳು ಹಾಗೂ ವ್ಯಕ್ತಿಗಳು ಖರೀದಿ ಮಾಡಿರುವ 1 ಸಾವಿರ ರೂ ದಿಂದ 1 ಕೋಟಿ ರೂ ಮುಖಬೆಲೆಯವರೆಗಿನ ಬಾಂಡ್ಗಳ ವಿವರಗಳನ್ನು ಬಹಿರಂಗಪಡಿಸಲಾಗಿದೆ. 12,155 ಕೋಟಿ ರೂ ಮೊತ್ತದ ಎಲೆಕ್ಟೊರಲ್ ಬಾಂಡ್ಗಳ ವಿವರ ನೀಡಲಾಗಿದೆ. ಅತಿ ಹೆಚ್ಚು ಬಾಂಡ್ಗಳನ್ನು ಖರೀದಿ ಮಾಡುವ ಮೂಲಕ ದೇಣಿಗೆ ನೀಡಿದವರು ಯಾರು ಎಂಬ ಕುತೂಹಲ ತಣಿದಿದೆ.
ಆದರೆ ಮೊದಲ ಸ್ಥಾನದಲ್ಲಿ ಹೆಸರಾಂತ ಉದ್ಯಮಿಗಳನ್ನು ನಿರೀಕ್ಷಿಸಿದ್ದವರಿಗೆ ಅಚ್ಚರಿ ಉಂಟಾಗಿದೆ. ಅತಿ ಹೆಚ್ಚು ದೇಣಿಗೆಗಳನ್ನು ನೀಡಿದವರಲ್ಲಿ ಅಷ್ಟೇನೂ ಜನಪ್ರಿಯವಲ್ಲದ ಕಾರ್ಪೊರೇಟ್ ಸಂಸ್ಥೆಗಳೇ ಮುಂಚೂಣಿಯಲ್ಲಿವೆ. ಇದರಲ್ಲಿ ಫ್ಯೂಚರ್ ಗೇಮಿಂಗ್ ಆಂಡ್ ಹೋಟೆಲ್ ಸರ್ವಿಸಸ್ (1,368 ಕೋಟಿ ರೂ), ಮೇಘಾ ಎಂಜಿನಿಯರಿಂಗ್ ಆಂಡ್ ಇನ್ಫ್ರಾಸ್ಟ್ರಕ್ಚರ್ಸ್ (977 ಕೋಟಿ ರೂ) ಹಾಗೂ ಕ್ವಿಕ್ಸಪ್ಲೈ ಚೈನ್ ಪ್ರೈ ಲಿ (410 ಕೋಟಿ ರೂ) ಮೊದಲ ಮೂರು ಸ್ಥಾನದಲ್ಲಿವೆ.
‘ಲಾಟರಿ ಕಿಂಗ್‘ ದೇಣಿಗೆಯಲ್ಲೂ ಕಿಂಗ್!
ಅತಿ ಹೆಚ್ಚು ದೇಣಿಗೆ ರಾಜಕೀಯ ಪಕ್ಷಗಳಿಗೆ ಸಂದಾಯವಾಗಿರುವುದು ‘ಲಾಟರಿ ಕಿಂಗ್’ ಎಂದೇ ಖ್ಯಾತರಾದ ಸಾಂಟಿಯಾಗೋ ಮಾರ್ಟಿನ್ ಮಾಲೀಕತ್ವದ ಫ್ಯೂಚರ್ ಗೇಮಿಂಗ್ ಆಂಡ್ ಹೋಟೆಲ್ ಸರ್ವೀಸಸ್ ಪ್ರೈ ಲಿ ಕಂಪೆನಿಯಿಂದ.
ಸಾಂಟಿಯಾಗೋ ಮಾರ್ಟಿನ್ ಚಾರಿಟೇಬಲ್ ಟ್ರಸ್ಟ್ ವೆಬ್ಸೈಟ್ ಪ್ರಕಾರ, ಅವರು ಮಯನ್ಮಾರ್ನ ಯಾಂಗೋನ್ನಲ್ಲಿ ಕಾರ್ಮಿಕನಾಗಿ ವೃತ್ತಿ ಜೀವನ ಆರಂಭಿಸಿದ್ದರು. 1988ರಲ್ಲಿ ಅವರು ಭಾರತಕ್ಕೆ ವಾಪಸಾಗಿ, ತಮಿಳುನಾಡಿನಲ್ಲಿ ಲಾಟರಿ ವ್ಯಾಪಾರ ಆರಂಭಿಸಿದರು. ಬಳಿಕ ಅವರು ತಮ್ಮ ವ್ಯವಹಾರವನ್ನು ಕರ್ನಾಟಕ ಹಾಗೂ ಕೇರಳಕ್ಕೆ ವಿಸ್ತರಿಸಿದರು. ನಂತರ ಈಶಾನ್ಯ ಭಾರತದತ್ತ ತೆರಳಿದರು.
ಈಶಾನ್ಯದಲ್ಲಿ ಅವರು ಸರ್ಕಾರದ ಲಾಟರಿ ಯೋಜನೆಗಳನ್ನು ನಿರ್ವಹಿಸುವ ಮೂಲಕ ವ್ಯವಹಾರ ಆರಂಭಿಸಿದರು. ಕ್ರಮೇಣ ಅದರಲ್ಲಿ ಯಶಸ್ಸು ಕಂಡ ಸಾಂಟಿಯಾಗೋ, ಭೂತಾನ್ ಮತ್ತು ನೇಪಾಳಗಳಲ್ಲಿ ಸಂಸ್ಥೆ ಆರಂಭಿಸು ಮೂಲಕ ವಿದೇಶಗಳಲ್ಲಿಯೂ ಉದ್ಯಮವನ್ನು ವಿಸ್ತರಿಸಿದರು. ನಂತರ ಅವರು ಲಾಟರಿ ಉದ್ಯಮದಿಂದ ಆಚೆ ಇತರೆ ಉದ್ಯಮಗಳತ್ತ ಗಮನ ಹರಿಸಿದರು. ನಿರ್ಮಾಣ, ರಿಯಲ್ ಎಸ್ಟೇಟ್, ಜವಳಿ ಹಾಗೂ ಆತಿಥ್ಯ ಕ್ಷೇತ್ರಗಳಿಗೂ ಕಾಲಿರಿಸಿದರು.
“ಅವರು ಅಖಿಲ ಭಾರತ ಲಾಟರಿ ವ್ಯಾಪಾರ ಮತ್ತು ಸಹವರ್ತಿ ಕೈಗಾರಿಕೆಗಳ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಈ ಸಂಸ್ಥೆಯು ಭಾರತದಲ್ಲಿನ ಲಾಟರಿ ವ್ಯಾಪಾರದ ಉನ್ನತಿ ಹಾಗೂ ವಿಶ್ವಾಸಾರ್ಹತೆ ಬೆಳೆಸುವ ನಿಲ್ಲಿನಲ್ಲಿ ಕೆಲಸ ಮಾಡುತ್ತಿದೆ. ಅವರ ಉಸ್ತುವಾರಿ, ಉದ್ಯಮದಲ್ಲಿ ಫ್ಯೂಚರ್ ಗೇಮಿಂಗ್ ಸಲ್ಯೂಷನ್ಸ್ ಇಂಡಿಯಾ ಪ್ರೈ ಲಿ ಸಂಸ್ಥೆಯು ಪ್ರತಿಷ್ಠಿತ ಜಾಗತಿಕ ಲಾಟರಿ ಸಂಸ್ಥೆಯ ಸದಸ್ಯತ್ವ ಪಡೆದಿದೆ. ಇದು ಆನ್ಲೈನ್ ಗೇಮಿಂಗ್ ಮತ್ತು ಕ್ಯಾಸಿನೋಗಳು ಹಾಗೂ ಕ್ರೀಡಾ ಬೆಟ್ಟಿಂಗ್ ಕ್ಷೇತ್ರಗಳಿಗೆ ವಿಸ್ತರಿಸಿಕೊಳ್ಳುತ್ತಿದೆ” ಎಂದು ವೆಬ್ಸೈಟ್ ತಿಳಿಸಿದೆ.
ಜಾರಿ ನಿರ್ದೇಶನಾಲಯದ ತನಿಖೆ
ಫ್ಯೂಚರ್ ಗೇಮಿಂಗ್ ಕಂಪೆನಿ ಮೇಲೆ ಜಾರಿ ನಿರ್ದೇಶನಾಲಯದ ಕಣ್ಣು ಬಿದ್ದಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಉಲ್ಲಂಘನೆ ಆರೋಪದಡಿ 2019ರಿಂದ ಇ.ಡಿ ತನಿಖೆ ನಡೆಸುತ್ತಿದೆ. 2023ರಲ್ಲಿ ಕೊಯಮತ್ತೂರು ಹಾಗೂ ಚೆನ್ನೈನಲ್ಲಿ ದಾಳಿಗಳನ್ನು ಕೂಡ ನಡೆಸಲಾಗಿತ್ತು.
ಕಂಪೆನಿಯು ಸಿಕ್ಕಿಂ ಸರ್ಕಾರದ ಲಾಟರಿಗಳನ್ನು ಕೇರಳದಲ್ಲಿ ಮಾರಾಟ ಮಾಡಿದೆ ಎಂಬ ಆರೋಪದಲ್ಲಿ ಸಿಬಿಐ ಸಲ್ಲಿಸಿದ್ದ ಚಾರ್ಜ್ಶೀಟ್ ಆಧಾರದಲ್ಲಿ ಇಡಿ ತನಿಖೆ ನಡೆಸಿದೆ. ಸಾಂಟಿಯಾಗೋ ಮಾರ್ಟಿನ್ ಮತ್ತು ಅವರ ಕಂಪೆನಿಗಳು 2009ರ ಏಪ್ರಿಲ್ನಿಂದ 2010ರ ಆಗಸ್ಟ್ವರೆಗೆ ಟಿಕೆಟ್ ಮಾರಾಟಗಳಲ್ಲಿ ವಂಚನೆ ಎಸಗಿ, ಸಿಕ್ಕಿಂ ಸರ್ಕಾರಕ್ಕೆ 910 ಕೋಟಿ ರೂ ನಷ್ಟ ಉಂಟುಮಾಡಿವೆ ಎಂದು ಆರೋಪಿಸಲಾಗಿದೆ.