ಬೆಂಗಳೂರು:- ಯಡಿಯೂರಪ್ಪರಿಂದ ನನಗೆ ಬರೀ ಮೋಸವಾಗಿದೆ, ಇನ್ನು ಅವರನ್ನು ನಂಬಲಾಗಲ್ಲ ಎಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ತನ್ನ ಮಗನಿಗೆ ಹಾವೇರಿ ಕ್ಷೇತ್ರದ ಟಿಕೆಟ್ ಕೊಡಿಸುವ ಭರವಸೆ ಯಡಿಯೂರಪ್ಪ ನೀಡಿದ ಬಳಿಕ ಕಾಂತೇಶ್ ಅಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಾ ಜನರ ಅನುರಾಗ ಗಳಿಸಿದ್ದ. ಇನ್ನೇನು ಟಿಕೆಟ್ ಸಿಗುತ್ತದೆ ಅಂದುಕೊಳ್ಳುವಾಗಲೇ ಮೋಸ ಮಾಡಿಬಿಟ್ಟರು. ಕಾಂತೇಶ್ ನನ್ನು ಎಂಎಲ್ ಸಿ ಮಾಡ್ತೀನಿ ಅಂತ ಈಗ ಹೇಳುತ್ತಾ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ತನಗೆ ಕೋರ್ಟ್ ಕ್ಲೀನ್ ಕೊಟ್ಟ ತಕ್ಷಣ ಪುನಃ ಮಂತ್ರಿ ಮಾಡುವುದಾಗಿ ಹೇಳಿದ್ದ ಯಡಿಯೂರಪ್ಪ ಆಗಲೂ ಮೋಸಮಾಡಿದರು, 40 ವರ್ಷಗಳ ಪಕ್ಷದ ಸಂಘಟನೆ ಮಾಡಿದ ತನ್ನಂಥವನಿಗೆ ಇಷ್ಟು ದೊಡ್ಡ ಮೋಸಗಳನ್ನು ಮಾಡಿದರೆ ಅವರನ್ನು ನಂಬೋದಾದರೂ ಹೇಗೆ ಎಂದು ಈಶ್ವರಪ್ಪ ಕೇಳಿದರು.
ತಾನು ರಾಯಣ್ಣ ಬ್ರಿಗೇಡ್ ಮಾಡಿದಾಗಲೂ ಅಮಿತ್ ಶಾ ಅವರಿಗೆ ಹೇಳಿ ಅದಕ್ಕೆ ಅಡ್ಡಗಾಲು ಹಾಕಿ ನಿಲ್ಲಿಸಿಬಿಟ್ಟರು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಶೋಭಾ ಅಭಿಯಾನ ನಡೆದರೂ ಅವರಿಗೆ ಡಿವಿ ಸದಾನಂದಗೌಡ ಪ್ರತಿನಿಧಿಸುವ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೊಡಿಸಿದ್ದಾರೆ, ಅದೇ ಹಟಮಾರಿತನವನ್ನು ಅವರು ತನ್ನ ಮಗನ ವಿಷಯದಲ್ಲಿ ಯಾಕೆ ಪ್ರದರ್ಶಿಸಲಿಲ್ಲ ಎಂದು ಈಶ್ವರಪ್ಪ ಖಾರವಾಗಿ ಪ್ರಶ್ನಿಸಿದರು.