ಬೆಂಗಳೂರು:– ಶೋಭಾಗೆ ಟಿಕೆಟ್ ಕೊಡ್ಸಿದ್ದಕ್ಕೆ ಬಿಎಸ್ವೈ ವಿರುದ್ಧ ಈಶ್ವರಪ್ಪ ಕಿಡಿಕಾರಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಇಡೀ ರಾಜ್ಯದಲ್ಲಿ ಚಿಕ್ಕಮಗಳೂರಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಆದಷ್ಟು ಗೋ ಬ್ಯಾಕ್ ಬೇರೆ ಎಲ್ಲಿಯೂ ಆಗಿಲ್ಲ.ಅಂತಹ ಶೋಭಾಗೆ ಚಿಕ್ಕಮಗಳೂರಿನಿಂದ ಕರೆದುಕೊಂಡು ಬಂದು ಸದಾನಂದ ಗೌಡಗೆ ಟಿಕೆಟ್ ತಪ್ಪಿಸಿದ್ದಾರೆ. ಶೋಭಾನ ಯಾಕೆ ಕರೆದುಕೊಂಡು ಬಂದು ಹಾಕಿದ್ರು? ಎಂದು ಪ್ರಶ್ನಿಸಿದರು.
ಜನರಿಗೆ ಬೇಡವಾದವರು, ತನಗೆ ಬೇಕಾದವರನ್ನು ಹಾಕಿಕೊಳ್ಳೋಕೆ ಶಕ್ತಿ ಇದೆ. ನಾನು 40 ವರ್ಷಗಳ ಕಾಲ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ನಾನು ಎಂದೆಂದಿಗೂ ಸಂಘಟನೆ ವಿರುದ್ಧ ಕೆಲಸ ಮಾಡಿಲ್ಲ. ರಾಯಣ್ಣ ಬ್ರಿಗೇಡ್ ಮಾಡಿ ಲಕ್ಷಾಂತರ ಜನರ ಸಂಘಟನೆ ಮಾಡುವ ಕೆಲಸ ಆಗಿತ್ತು. ಅದಕ್ಕೆ ಇವರಿಗೆ ಯಾಕೆ ಕಣ್ಣು ಉರಿ ಆಯ್ತೋ ಗೊತ್ತಿಲ್ಲ.ಯಡಿಯೂರಪ್ಪನವರು ಅಮಿತ್ ಶಾ ಬಳಿ ಹೋಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸೋಕೆ ಹೇಳಿ ಎಂದು ಒತ್ತಾಯ ಮಾಡಿದ್ದರು. ಆ ನಂತರ ನಾನು ದೊಡ್ಡವರ ಮಾತು ಕೇಳಿ ಸುಮ್ಮನೆ ಆದೆ ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಅದು ಇವತ್ತು ಮುಂದುವರಿದಿದ್ರೆ ಹಿಂದುಳಿದ ವರ್ಗಗಳದ್ದು ದೊಡ್ಡ ಸಂಘಟನೆ ಆಗುತ್ತಿತ್ತು. ಈಗ ಟಿಕೆಟ್ ಕೊಡುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾರೆ. ನಾನು ಎಂಎಲ್ಎ ಆಗಬೇಕೋ ಎಂಎಲ್ಸಿ ಆಗಬೇಕೋ ಎಂಪಿ ಆಗಬೇಕೋ ಎಂದು ಚುನಾವಣೆಗೆ ಸ್ಪರ್ಧೆ ಮಾಡೋದಿಲ್ಲ. ಇಷ್ಟು ದೊಡ್ಡ ಸಂಘಟನೆಯನ್ನು ಅಪ್ಪ ಮಕ್ಕಳು ಇಟ್ಟು ಕೊಂಡಿದ್ದಾರಲ್ಲ ಇದರ ವಿರುದ್ಧ ಪ್ರತಿಭಟಿಸಲು, ನೊಂದವರ ಧ್ವನಿಯಾಗಿ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹೇಳಿದರು.
ನಿಮ್ಮ ಮಗನಿಗೆ ಟಿಕೆಟ್ ಕೊಡಿಸುತ್ತೇನೆ ಅಂದಿದ್ದರು. ನಿಮ್ಮ ಮಗನಿಗೆ ಟಿಕೆಟ್ ಕೊಡಿಸಿ ನಾನೇ ಹಾವೇರಿಯಲ್ಲಿ ಓಡಾಡಿ ಗೆಲ್ಲಿಸೋದಾಗಿ ಹೇಳಿದ್ದರು. ಈಗ ಯಡಿಯೂರಪ್ಪ ಮತ್ತು ಅವರ ಮಕ್ಕಳು ಅನ್ಯಾಯ ಮಾಡಿದ್ದಾರೆ. ಸಿ.ಟಿ.ರವಿ, ಕಟೀಲು, ಪ್ರತಾಪ್ ಸಿಂಹ, ಸದಾನಂದಗೌಡಗೆ ಅನ್ಯಾಯವಾಗಿದೆ. ಹೀಗಾಗಿ ನೊಂದ ಬಿಜೆಪಿ ಕಾರ್ಯಕರ್ತರ ಧ್ವನಿಯಾಗಿ ಕೆಲಸ ಮಾಡಬೇಕೆಂದು ಎಲ್ಲರೂ ಒತ್ತಾಯಿಸಿದ್ದಾರೆ. ಶುಕ್ರವಾರ ಸಂಜೆ 5 ಗಂಟೆಗೆ ಶಿವಮೊಗ್ಗದಲ್ಲಿ ಸಭೆ ನಡೆಸುತ್ತಿದ್ದೇವೆ. ಬಂಜಾರ ಭವನದಲ್ಲಿ ಎಲ್ಲಾ ಸಮುದಾಯದವರೂ ಸೇರುತ್ತಿದ್ದಾರೆ. ಸಭೆಯಲ್ಲಿ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಪ್ರಕಟಿಸುವೆ ಎಂದು ಸ್ಪಷ್ಟಪಡಿಸಿದರು.