ನವದೆಹಲಿ: ಕರ್ನಾಟಕ ಹಾಗೂ ಕೆಲ ರಾಜ್ಯಗಳಲ್ಲಿ ಮಹಿಳೆಯರೂ ಸೇರಿದಂತೆ ವಿವಿಧ ವರ್ಗಗಳಿಗೆ ಪ್ರತಿ ತಿಂಗಳು ಹಣ ನೀಡುವ ‘ಗ್ಯಾರಂಟಿ’ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಪಕ್ಷ ಇದೀಗ ಕೇಂದ್ರದಲ್ಲೂ ಇದೇ ಪ್ರಯೋಗಕ್ಕೆ ದೊಡ್ಡ ಮಟ್ಟದಲ್ಲಿ ಕೈಹಾಕಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ದೇಶದ ಎಲ್ಲಾ ಕಡು ಬಡ ಕುಟುಂಬದ ತಲಾ ಒಬ್ಬ ಮಹಿಳೆಗೆ ‘ಮಹಾಲಕ್ಷ್ಮೀ ಗ್ಯಾರಂಟಿ’ ಯೋಜನೆಯಡಿ ಪ್ರತಿ ವರ್ಷ 1 ಲಕ್ಷ ರು. ನಗದು ನೀಡುವುದಾಗಿ ಪಕ್ಷದ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ಇದರ ಜೊತೆಗೆ, ಕೇಂದ್ರ ಸರ್ಕಾರದ ನೌಕರಿಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡುವುದು, ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಬಿಸಿಯೂಟದ ನೌಕರರಿಗೆ ನೀಡುವ ಕೇಂದ್ರ ಸರ್ಕಾರದ ವೇತನವನ್ನು ದುಪ್ಪಟ್ಟು ಮಾಡುವುದು,
ಕೆಲಸಕ್ಕೆ ಹೋಗುವ ಮಹಿಳೆಯರಿಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಹಾಸ್ಟೆಲ್ ತೆರೆಯುವುದು ಹಾಗೂ ಎಲ್ಲಾ ಪಂಚಾಯ್ತಿಗಳಲ್ಲೂ ಅರೆ ನ್ಯಾಯಾಂಗ ಅಧಿಕಾರಿಯೊಬ್ಬರನ್ನು ನೇಮಿಸಿ ಮಹಿಳೆಯರಿಗೆ ಅವರ ಹಕ್ಕುಗಳನ್ನು ಪಡೆದುಕೊಳ್ಳಲು ನೆರವಾಗುವ ಒಟ್ಟು ಐದು ಗ್ಯಾರಂಟಿಗಳನ್ನು ‘ನಾರಿ ನ್ಯಾಯ’ ಹೆಸರಿನಲ್ಲಿ ರಾಹುಲ್ ಗಾಂಧಿ ಪ್ರಕಟಿಸಿದ್ದಾರೆ.