ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಲಖನೌನಲ್ಲಿ ಬೋನಿ ಕಪೂರ್ ಹಾಗೂ ಯೋಗಿ ಆದಿತ್ಯನಾಥ್ ಭೇಟಿ ನಡೆದಿದ್ದು ಈ ವೇಳೆ ನೋಯ್ಡಾದಲ್ಲಿ ನಿರ್ಮಾಣ ಆಗಲಿರುವ ಫಿಲ್ಮ್ ಸಿಟಿ ಬಗ್ಗೆ ಮಾತನಾಡಿದ್ದಾರೆ.
ನೋಯ್ಡಾದಲ್ಲಿ ಸಾವಿರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಕಾರ್ಯ ನಡೆಯಲಿದ್ದು ಅದರ ಉಸ್ತುವಾರಿಯನ್ನು ಬೋನಿ ಕಪೂರ್ ಪಡೆದಿದ್ದಾರೆ. ಬೋನಿ ಕಪೂರ್ ಅವರ ಒಡೆತನದ ‘ಬೇವ್ಯೂ ಪ್ರಾಜೆಕ್ಸ್ಟ್’ ಮತ್ತು ಭೂತಾನಿ ಗ್ರೂಪ್ ಸಹಯೋಗದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಆಗಲಿದೆ.
ಮುಂಬರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಬೇಕಾದ ಎಲ್ಲ ಬಗೆಯ ಅನುಮತಿಗಳಿರುವ ಪತ್ರವನ್ನು ಯೋಗಿ ಆದಿತ್ಯನಾಥ್ ಅವರು ಬೋನಿ ಕಪೂರ್ಗೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಅತ್ಯಾಧುನಿಕ ಸೌಕರ್ಯಗಳು ಇರುವ ಫಿಲ್ಮ್ ಸಿಟಿ ನಿರ್ಮಾಣ ಆಗಬೇಕು ಎಂಬುದು ಯೋಗಿ ಆದಿತ್ಯನಾಥ್ ಅವರ ಕನಸು. ಅದನ್ನು ಸಾಕಾರಗೊಳಿಸುವ ಅವಕಾಶವನ್ನು ತಮಗೆ ನೀಡಿದ್ದಕ್ಕಾಗಿ ಬೋನಿ ಕಪೂರ್ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೇ ಬಹಳ ಬದ್ಧತೆಯಿಂದ ಈ ಕಾರ್ಯ ಮಾಡುವುದಾಗಿ ಅವರು ಹೇಳಿದ್ದಾರೆ.
ನೋಯ್ಡಾದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡುವ ಟೆಂಡರ್ ತಮಗೆ ಸಿಕ್ಕಿರುವುದಕ್ಕೆ ಬೋನಿ ಕಪೂರ್ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಉತ್ಕೃಷ್ಟ ಗುಣಮಟ್ಟದೊಂದಿಗೆ ಈ ಪ್ರಾಜೆಕ್ಟ್ ಅನ್ನು ಯಶಸ್ವಿಗೊಳಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ. ಈ ಫಿಲ್ಮ್ ಸಿಟಿ ನಿರ್ಮಾಣ ಆದ ಬಳಿಕ ಚಿತ್ರರಂಗಕ್ಕೆ ಬಹಳ ಅನುಕೂಲ ಆಗಲಿದೆ. ಎಲ್ಲ ಬಗೆಯ ಕಾರ್ಯಗಳು ಒಂದೇ ಕಡೆ ಆಗುವ ರೀತಿ ಆಗಲಿದೆ. ಜಗತ್ತಿನಾದ್ಯಂತ ಇರುವ ಫಿಲ್ಮ್ ಮೇಕರ್ಗಳು ತಮ್ಮ ಸ್ಕ್ರಿಪ್ಟ್ ತೆಗೆದುಕೊಂಡು ಬಂದರೆ ಮುಂದಿನ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುವಂತಹ ಸೌಲಭ್ಯಗಳು ಈ ಫಿಲ್ಮ್ ಸಿಟಿಯಲ್ಲಿ ಸಿಗಲಿವೆ.