ನಟಿ ಕಂಗನಾ ರಣಾವತ್ ಅವರು ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಕೇಂದ್ರ ಸರ್ಕಾರದ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ.
ಕಂಗನಾ ರಣಾವತ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಸಿಎಎ ಎಂದು ಕ್ಯಾಪ್ಷನ್ ನೀಡಿದ್ದು ಇಂಡಿಯನ್ ಫ್ಲ್ಯಾಗ್ ಎಮೋಜಿಯನ್ನು ಅವರು ಬಳಸಿದ್ದಾರೆ. ಆ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಆಗುತ್ತಿರುವುದಕ್ಕೆ ತಮ್ಮ ಬೆಂಬಲ ಇದೆ ಎಂಬುದನ್ನು ಅವರು ಸೂಚಿಸಿದ್ದಾರೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡಿದ ವಿಡಿಯೋವನ್ನು ಕಂಗನಾ ರಣಾವತ್ ಅವರು ಈಗ ಹಂಚಿಕೊಂಡಿದ್ದಾರೆ. ‘ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ನಿಮ್ಮ ಭಾವನೆ ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೂ ಮುನ್ನ ಸಿಎಎ ಎಂದರೆ ಏನು ಎಂಬುದನ್ನು ತಿಳಿದುಕೊಳ್ಳಿ’ ಎಂದು ಕಂಗನಾ ರಣಾವತ್ ಅವರು ಕ್ಯಾಪ್ಷನ್ ನೀಡಿದ್ದಾರೆ.
ಕಂಗನಾ ರಣಾವತ್ ಅವರು ಇನ್ನೂ ನೇರವಾಗಿ ರಾಜಕೀಯಕ್ಕೆ ಕಾಲಿಟ್ಟಿಲ್ಲ. ಆದರೂ ಅವರು ರಾಜಕೀಯದ ಕುರಿತು ಅನೇಕ ವಿಚಾರಗಳ ಬಗ್ಗೆ ತಮ್ಮ ಅನಿಸಿಕೆ ತಿಳಿಸುತ್ತಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಆಧರಿಸಿ ಕಂಗನಾ ಅವರು ‘ಎಮರ್ಜೆನ್ಸಿ’ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುವುದರ ಜೊತೆ ನಿರ್ದೇಶಕವನ್ನೂ ಅವರೇ ಮಾಡಿದ್ದಾರೆ.