ನವದೆಹಲಿ:- 2024 ರ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ರಾಷ್ಟ್ರೀಯ ಪಕ್ಷಗಳು ಭರ್ಜರಿ ಸಿದ್ಧತೆ ಕೈಗೊಂಡಿದೆ.
ಇನ್ನೂ ಕಾಂಗ್ರೆಸ್, ಬಿಜೆಪಿ, ಸೇರಿ ಇನ್ನಿತರ ಪಕ್ಷಗಳು ಗೆಲುವಿನ ಲೆಕ್ಕಾಚಾರದಲ್ಲಿದ್ದು, ಇದೇ ವೇಳೆ ಸಮೀಕ್ಷೆ ಶಾಕಿಂಗ್ ಅಂಶಗಳನ್ನು ಬಹಿರಂಗಪಡಿಸಿದೆ.
ಮುಂಬರುವ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ 400 ಸ್ಥಾನಗಳು ಸಿಗುವುದು ಕಷ್ಟ ಎನ್ನಲಾಗಿದ್ದು, ಸಮೀಕ್ಷೆಯ ಪ್ರಕಾರ ಮತ್ತೊಮ್ಮೆ ಭಾರತೀಯ ಜನತಾ ಪಕ್ಷ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಲಿದೆ ಎನ್ನಲಾಗಿದೆ.
2019 ಕ್ಕೆ ಹೋಲಿಸಿದರೆ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಸ್ಥಾನಗಳು ಹೆಚ್ಚಾಗಲಿವೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ, ಆದರೆ 400 ಸ್ಥಾನಗಳನ್ನು ಗೆಲ್ಲುವ ಪ್ರಧಾನಿ ಮೋದಿ ಅವರ ಕನಸು ನನಸಾಗುವುದು ಕಷ್ಟಸಾಧ್ಯ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಆಡಳಿತಾರೂಢ ಎನ್ಡಿಎ ಮೈತ್ರಿಕೂಟಕ್ಕೆ ಸುಮಾರು 400 ಸ್ಥಾನಗಳನ್ನು ನೀಡಲಾಗಿದೆ. ಇದೇ ವೇಳೆ ವಿರೋಧ ಪಕ್ಷಗಳ ಐ.ಎನ್.ಡಿ.ಐ.ಎ. ಮೈತ್ರಿಕೂಟಕ್ಕೆ 100ಕ್ಕೂ ಹೆಚ್ಚು ಸ್ಥಾನ ಲಭಿಸಲಿವೆ ಎನ್ನಲಾಗಿದೆ. ಈ ಎರಡು ಮೈತ್ರಿಗಳನ್ನು ಹೊರತುಪಡಿಸಿ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ 21-22 ಸ್ಥಾನಗಳನ್ನು ನೀಡಲಾಗಿದೆ. ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ 10-11 ಲಭಿಸುವ ನಿರೀಕ್ಷೆ ಇದ್ದು, 11-15 ಸ್ಥಾನಗಳು ಇತರ ಪಕ್ಷಗಳು ಮತ್ತು ಸ್ವತಂತ್ರ ಪಾಲಾಗಬಹುದು
ಕಾಂಗ್ರೆಸ್ 50 ಸ್ಥಾನ ಗೆಲ್ಲುವುದು ಕಷ್ಟ ಎಂದ ಸಮೀಕ್ಷೆ
ಭಾರತೀಯ ಜನತಾ ಪಕ್ಷದ ಸ್ಥಾನಗಳು ಹೆಚ್ಚಾಗಬಹುದು ಎಂದು ಸಮೀಕ್ಷೆ ಹೇಳಿದೆ. ಈ ಪಕ್ಷ 333-363 ಸ್ಥಾನಗಳನ್ನು ಪಡೆಯಬಹುದು. ಇದೇ ವೇಳೆ ಕಾಂಗ್ರೆಸ್ 50 ಸ್ಥಾನ ಗೆಲ್ಲುವುದು ಕಷ್ಟ. ಕಾಂಗ್ರೆಸ್ 28-48 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಕಾಂಗ್ರೆಸ್ನ ಮಿತ್ರ ಪಕ್ಷವಾದ ಡಿಎಂಕೆ 24-28 ಸ್ಥಾನಗಳನ್ನು ಪಡೆಯಬಹುದು. ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ 17-21 ಸ್ಥಾನಗಳನ್ನು ಪಡೆಯಬಹುದು. ಆಮ್ ಆದ್ಮಿ ಪಕ್ಷವು ಮೊದಲ ಬಾರಿಗೆ 5 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.
ಬಿಜೆಪಿ 370 ಸ್ಥಾನ ಗೆದ್ದರೆ 400ರ ಗುರಿ ತಲುಪಲಿದೆ
ಎನ್ಡಿಎ ಮೈತ್ರಿಕೂಟಕ್ಕೆ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಪ್ರಧಾನಿ ಮೋದಿ ಹೊಂದಿದ್ದಾರೆ. ಇದರೊಂದಿಗೆ, ಈ ಗುರಿಯನ್ನು ಸಾಧಿಸಲು, ಭಾರತೀಯ ಜನತಾ ಪಕ್ಷವು ಕನಿಷ್ಠ 370 ಸ್ಥಾನಗಳನ್ನು ಗೆಲ್ಲಬೇಕು ಎಂದು ಅವರು ಹೇಳಿದ್ದಾರೆ. ಸಮೀಕ್ಷೆಯಲ್ಲಿ ಈ ಅಂಕಿ ಅಂಶವನ್ನು ಮುಟ್ಟಲು ಬಿಜೆಪಿಗೆ ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಬಿಜೆಪಿ ಗರಿಷ್ಠ 363 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಬಿಜೆಪಿ 370 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾದರೆ ಎನ್ಡಿಎ ಮೈತ್ರಿಕೂಟವು ಸುಲಭವಾಗಿ 400 ಸ್ಥಾನಗಳ ಗಡಿ ದಾಟಲಿದೆ ಎಂದು ಸಮೀಕ್ಷೆ ಹೇಳಿದೆ.