ಬೆಂಗಳೂರು :- ಪರೀಕ್ಷೆಗೆ ಉತ್ತರಪತ್ರಿಕೆ ಕೊಡಲಾಗದಷ್ಟು ಸರ್ಕಾರದ ಖಜಾನೆ ಖಾಲಿ ಆಗಿದೆಯೇ!? ಎಂದು ಎನ್.ರವಿಕುಮಾರ್ ಪ್ರಶ್ನೆ ಮಾಡಿದ್ದಾರೆ.
ಪರೀಕ್ಷೆಗೆ ಉತ್ತರಪತ್ರಿಕೆ ಕೊಡಲಾಗದಷ್ಟು ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿದೆಯೇ ಎಂದು ರಾಜ್ಯ ಶಿಕ್ಷಣ ಸಚಿವರಿಗೆ ಪ್ರಶ್ನಿಸಿದ್ದಾರೆ. 8ರಿಂದ 8.5 ಲಕ್ಷ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ನೀವು ಪ್ರಿಪರೇಟರಿ ಪರೀಕ್ಷೆ ನಡೆಸಲು 50 ರೂ. ಸಂಗ್ರಹಿಸಿ ಪ್ರಶ್ನೆಪತ್ರಿಕೆ ನೀಡುವುದಾದರೆ, ಉತ್ತರ ಪತ್ರಿಕೆ ನೀವೇ ತರಬೇಕು ಎನ್ನುವುದಾದರೆ ಸರ್ಕಾರ ಯಾವ ಅಧೋಗತಿಗೆ ತಲುಪಿದೆ? ಇದು ಬಹಳ ನೋವಿನ ವಿಚಾರ. ಶಿಕ್ಷಣದ ಕುರಿತ ಕಳಕಳಿಯಿಂದ ಇದನ್ನು ಬಿಜೆಪಿ ಪ್ರಶ್ನಿಸುತ್ತಿದೆ ಎಂದಿದ್ದಾರೆ.
11 ಮತ್ತು 12ನೇ ತರಗತಿಗೆ ಎರಡೆರಡು ಸಪ್ಲಿಮೆಂಟರಿ ಪರೀಕ್ಷೆ ನಡೆಸಲು ಸರ್ಕಾರ ಅಸ್ತು ಎಂದಿದೆ. ಎಸ್ಎಸ್ಎಲ್ಸಿ (SSLC) ಪ್ರಿಪರೇಟರಿ ಪರೀಕ್ಷೆ ನಡೆಸಲು ಸರ್ಕಾರ ಹಣ ಕೊಡುತ್ತಿಲ್ಲ. ವಿದ್ಯಾರ್ಥಿಗಳ ಬಳಿ ಹಣ ಸಂಗ್ರಹಿಸಿ, ಕೇವಲ ಪ್ರಶ್ನೆಪತ್ರಿಕೆ ಕೊಡುವುದಾಗಿ ಹೇಳುತ್ತಾರೆ. ಉತ್ತರ ಪತ್ರಿಕೆ ನೀಡುವುದಿಲ್ಲ ಎಂದಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಳ್ಳಿಯಿಂದ ಸಣ್ಣಪುಟ್ಟ ಪಟ್ಟಣಕ್ಕೆ ಬರಲು 90% ಶಿಕ್ಷಕವರ್ಗ ಬಸ್ಸನ್ನೇ ಆಶ್ರಯಿಸಿದೆ. ಉಚಿತ ಬಸ್ಗಳಿಂದಾಗಿ ಬಸ್ಗಳು ಲಭ್ಯವಿಲ್ಲ. ಬಸ್ಸುಗಳು ಕಡಿಮೆಯಾಗಿವೆ. ಇದರಿಂದ ಶಿಕ್ಷಕರು, ವಿದ್ಯಾರ್ಥಿಗಳೂ ತಡವಾಗಿ ಬರುವಂತಾಗಿದೆ. ಉಚಿತ ಪ್ರಯಾಣದ ನಂತರ ಅರ್ಧಕ್ಕರ್ಧ ಬಸ್ ಕಡಿಮೆಯಾಗಿದೆ. ಬೆಳಿಗ್ಗೆ 10ಕ್ಕೆ ಶಾಲೆ ತೆರೆದರೆ 11, 12 ಗಂಟೆಗೆ ವಿದ್ಯಾರ್ಥಿಗಳು ಬರುವಂತಾಗಿದೆ. ಶಿಕ್ಷಕರೂ ಶಾಲೆಗೆ ಸಕಾಲದಲ್ಲಿ ಬರಲಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಶಾಲೆಗಳಲ್ಲಿ ಮೂಲಸೌಕರ್ಯವಿಲ್ಲ, ಕುಡಿಯುವ ನೀರಿನ ಸೌಲಭ್ಯ ಇಲ್ಲ. ಶೌಚಾಲಯ ಸೌಕರ್ಯ ಇಲ್ಲ. ಬಿಜೆಪಿ ಸರ್ಕಾರ ಇದ್ದಾಗ ಮಂಜೂರಾದ ವಿವೇಕ ಕೊಠಡಿಗಳನ್ನು ರದ್ದು ಮಾಡಿದ್ದಾರೆ. 13- 14 ಸಾವಿರ ಕೊಠಡಿ ನಿರ್ಮಾಣಕ್ಕೆ ಬೊಮ್ಮಾಯಿಯವರ ಕಾಲದಲ್ಲಿ ಬಿಜೆಪಿ ಸರ್ಕಾರ ನಿರ್ಣಯಿಸಿತ್ತು. ಅದನ್ನು ರದ್ದು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.