ಆರ್ಸಿಬಿ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ಆರ್ಸಿಬಿ ಆಪತ್ಬಾಂಧವ ಖ್ಯಾತಿಯ ಎಬಿ ಡಿವಿಲಿಯರ್ಸ್ ಕಂಬ್ಯಾಕ್ ಸುಳಿವು ನೀಡಿದ್ದಾರೆ.
17ನೇ ಆವೃತ್ತಿಯ ಐಪಿಎಲ್ಗೆ ವೇದಿಕೆ ಸಜ್ಜಾಗಿದೆ. ಇದೇ ಮಾರ್ಚ್ 22 ರಿಂದ ಲೀಗ್ಗೆ ಚಾಲನೆ ಸಿಗುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿವೆ. ಆದರೆ ಅದಕ್ಕೂ ಮುನ್ನ ಆರ್ಸಿಬಿ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ.
ವಾಸ್ತವವಾಗಿ 2021 ರ ನವೆಂಬರ್ನಲ್ಲಿ ಐಪಿಎಲ್ಗೆ ವಿದಾಯ ಹೇಳಿದ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಹಾಗೂ ಆರ್ಸಿಬಿ ಆಪತ್ಬಾಂಧವ ಖ್ಯಾತಿಯ ಎಬಿ ಡಿವಿಲಿಯರ್ಸ್ ಅಂದಿನಿಂದ ಯಾವುದೇ ಲೀಗ್ಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೀಗ ಮಿ. 360 ಮತ್ತೆ ಐಪಿಎಲ್ ಅಖಾಡದಲ್ಲಿ ಕಾಣಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ
2011 ರಿಂದ ಆರ್ಸಿಬಿ ಪರ ಆಡಿದ್ದ ಡಿವಿಲಿಯರ್ಸ್ ಅನೇಕ ಪಂದ್ಯವನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದರು. ಆದರೆ ತಂಡವು ಒಮ್ಮೆಯೂ ಪ್ರಶಸ್ತಿ ಗೆದ್ದಿರಲಿಲ್ಲ. ಆಟಗಾರನಾಗಿ ಕಪ್ ಗೆಲ್ಲುವಲ್ಲಿ ವಿಫಲರಾಗಿದ್ದ ಡಿವಿಲಿಯರ್ಸ್ ಇದೀಗ ತಂಡಕ್ಕೆ ಮಾರ್ಗದರ್ಶನ ನೀಡುವ ಮೂಲಕ ತಂಡವನ್ನು ಚಾಂಪಿಯನ್ ಮಾಡುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ.
ಆರ್ಸಿಬಿ ತಂಡವನ್ನು ಮತ್ತೆ ಸೇರುವ ಇಂಗಿತ ವ್ಯಕ್ತಪಡಿಸಿರುವ ಡಿವಿಲಿಯರ್ಸ್ ಆರ್ಸಿಬಿಯಿಂದ ಪ್ರಸ್ತಾವನೆ ಬಂದರೆ ಕೋಚಿಂಗ್ ನಿರಾಕರಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಎಬಿ, ವಿರಾಟ್ ಕೊಹ್ಲಿ ನನ್ನನ್ನು ಆರ್ಸಿಬಿಗೆ ಮರಳಿ ಕರೆತರುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಆದರೆ ಇದುವರೆಗೆ ಫ್ರಾಂಚೈಸಿಯಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ.