ಒಂದು ಕಾಲದ ಖ್ಯಾತ ನಟಿ ವಿಜಯಲಕ್ಷ್ಮೀ ಇತ್ತೀಚೆಗೆ ವಿವಾದದ ಮೂಲಕವೇ ಸಖತ್ ಸದ್ದು ಮಾಡುತ್ತಿದ್ದಾರೆ. ‘ಸೂರ್ಯವಂಶ’, ‘ನಾಗಮಂಡಲ’, ‘ಜೋಡಿ ಹಕ್ಕಿ’ ಅಂತಹ ಹಿಟ್ ಸಿನಿಮಾಗಳನ್ನು ನೀಡಿದ ನಟಿ ಒಂದಷ್ಟು ದಿನಗಳಿಂದ ಸೈಲೆಂಟ್ ಆಗಿದ್ದು ಇದೀಗ ತಮ್ಮ ಹೇಳಿಕೆಯ ಮೂಲಕ ಮತ್ತೆ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.
ನಾಮ್ ತಮಿಳರ್ ಪಾರ್ಟಿಯ ಸೀಮಾನ್ ವಿರುದ್ಧ ನಟಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮೂಲಕ ಎಚ್ಚರಿಕೆ ನೀಡಿದ್ದಾರೆ. ಇದು ತಮ್ಮ ಕೊನೆಯ ವಿಡಿಯೋ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.
ಫೆಬ್ರವರಿ 29ರಂದು ವಿಜಯಲಕ್ಷ್ಮಿ ಅವರು ತಮ್ಮ ಮನೆಯ ಟೆರೆಸ್ನಲ್ಲಿ ಒಂದು ವಿಡಿಯೋ ಮಾಡಿದ್ದರು. ‘ದಯವಿಟ್ಟು ಸೀಮಾನ್ ನನ್ನ ಜೊತೆ ಮಾತನಾಡಬೇಕು’ ಎಂದು ಅವರ ಆ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ಸೀಮಾನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಈಗ ಮಾರ್ಚ್ 5ರಂದು ವಿಜಯಲಕ್ಷ್ಮಿ ಅವರು ಹೊಸ ವಿಡಿಯೋ ಹಂಚಿಕೊಂಡಿದ್ದು ಅದರಲ್ಲಿ ತಾವು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ನಾನು ವಿಡಿಯೋ ಹಂಚಿಕೊಂಡು 5 ದಿನ ಕಳೆದರೂ ಕೂಡ ಸೀಮಾನ್ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ. ‘ಈ ರೀತಿ ವಿಡಿಯೋ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ನನಗೆ ಭಾವನಾತ್ಮಕವಾಗಿ ಎಷ್ಟು ನೋವಾಗಿರಬಹುದು ಅಂತ ನೀವೇ ಯೋಚಿಸಿ’ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. ‘ಪರವಾಗಿಲ್ಲ, ಆಕೆ ಬಿದ್ದು ಸಾಯಲಿ ಎಂಬುದು ಜನರ ಪ್ರತಿಕ್ರಿಯೆ ಆಗಿದ್ದರೆ ಎಲ್ಲವನ್ನೂ ಹೇಳುತ್ತೇನೆ ಕೇಳಿ’ ಎಂದಿದ್ದಾರೆ ವಿಜಯಲಕ್ಷ್ಮಿ.
‘ನನ್ನ ಸಹೋದರಿಯ ಸಮಸ್ಯೆಯಿಂದಾಗಿ ನಾನು ಮೊದಲ ಬಾರಿಗೆ ಸೀಮಾನ್ ಭೇಟಿ ಮಾಡಿದೆ. ಆಗ ಆತನಿಗೆ ಮದುವೆ ಆಗಿರಲಿಲ್ಲ. ನನ್ನನ್ನು ಮದುವೆ ಆಗುವುದಾಗಿ ಭರವಸೆ ನೀಡಿ, ನನ್ನ ಜೊತೆ ಆತ ಮೂರು ವರ್ಷ ಇದ್ದ. ಯಾರಿಗೂ ಗೊತ್ತಾಗದಂತೆ ಆತ ನನ್ನ ಜೊತೆ ರಹಸ್ಯವಾಗಿ ಮದುವೆ ಆದ. ನನ್ನ ಇಡೀ ಬದುಕನ್ನು ಹಾಳು ಮಾಡಿದ. ಸಮಸ್ಯೆಗಳು ಎದುರಾದಾಗ ನನ್ನನ್ನು ಒಂಟಿ ಮಾಡಿದ’ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.
‘ಇದು ನನ್ನ ಕೊನೆಯ ವಿಡಿಯೋ. ಇನ್ನು ಎರಡು ದಿನದೊಳಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಾನು ಕರ್ನಾಟಕದಲ್ಲಿ ಸಾಯಲು ಸಿದ್ಧಳಾಗಿದ್ದೇನೆ. ಇದಕ್ಕೆಲ್ಲ ಸೀಮಾನ್ ಕಾರಣ’ ಎಂದು ವಿಜಯಲಕ್ಷ್ಮಿ ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ. ತಮಿಳಿನಲ್ಲಿ ಅವರು ಮಾತನಾಡಿರುವ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.