ಕ್ರೇಜಿಸ್ಟಾರ್ ರವಿಚಂದ್ರನ್ ಕೊಪ್ಪಳದ ಕನಕಗಿರಿ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ವೇದಿಕೆಯ ಮೇಲೆ ರವಿಚಂದ್ರನ್ ಸಾಕಷ್ಟು ಘಟನೆಗಳನ್ನು ಮೆಲುಕು ಹಾಕಿದ್ದಾರೆ. ತಾವು ಕಷ್ಟದಲ್ಲಿದ್ದ ಸಂದರ್ಭವನ್ನು ನೆನೆದು ರವಿಚಂದ್ರನ್ ಭಾವುಕರಾಗಿದ್ದಾರೆ. ಅಲ್ಲದೆ 80ರ ದಶಕದಲ್ಲೇ ಸೂಪರ್ಡೂಪರ್ ಹಿಟ್ ಆದ ‘ಪ್ರೇಮಲೋಕ’ ಸಿನಿಮಾದ ಮುಂದುವರಿದ ಭಾಗದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭ ಮಾಡುವುದಾಗಿ ತಿಳಿಸಿದರು.
ತಮ್ಮ ಸಿನಿ ಜರ್ನಿಯ ಕುರಿತು ಮಾತನಾಡಿದ ಕ್ರೇಜಿಸ್ಟಾರ್ ‘1886ರಲ್ಲಿ ನನ್ನ ವೇಗವನ್ನು ತಡೆಯಲು ಆಗ್ತಿರಲಿಲ್ಲ. 86ರಲ್ಲಿ ಪ್ರೇಮಲೋಕ ಪ್ರಾರಂಭಿಸಿ, 87ರಲ್ಲಿ ಮುಗಿಸಿದೆ. ಇದರ ಹಿಂದೆಯೇ ಶಾಂತಿ-ಕ್ರಾಂತಿ ಮಾಡಿದೆ. ನಾಲ್ಕು ಭಾಷೆಯಲ್ಲಿ ರಿಲೀಸ್ ಮಾಡಿದ ಈ ಚಿತ್ರಕ್ಕಾಗಿ 10 ದಿನಗಳ ಚಿತ್ರೀಕರಣ ಮುಗಿಸಿದೆ. ಯಾಕೋ ಮಧ್ಯೆದಲ್ಲಿ ಅನಿಸಿತು ಇದು ಕೈತಪ್ತಿದೆ, ಸರಿಹೋಗುತ್ತಿಲ್ಲ ಎಂದು ನನ್ನ ತಂದೆಗೆ ತಿಳಿಸಿದೆ. ಆಗ ಅವರು ಯಾವುದೇ ಕಾರಣಕ್ಕೂ ನಿಲ್ಲಿಸಬೇಡ, ಮುಂದುವರೆಸು’ ಎಂದರು.
‘ಜನರಿಗೆ ಮೋಸ ಮಾಡಬಾರದು. ಸಿನಿಮಾ ಶುರು ಮಾಡಿದ್ಯಾ, ಮುಗಿಸು. ನಿನ್ನ ನಂಬಿ ರಜನಿಕಾಂತ್, ನಾಗುರ್ಜನ್ ಡೇಟ್ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆ ಹಿಂದೆ ಇಡಬೇಡ’ ಎಂದು ನಮ್ಮ ತಂದೆ ಹೇಳಿದರು. ಈ ಸಿನಿಮಾ ನಾವು ಅಂದುಕೊಂಡಂತೆ ಆಗೋದಿಲ್ಲ ಅಂತ ಗೊತ್ತಿದ್ರು ಮುಗಿಸಿದೆ. ಆಗ 10 ಕೋಟಿ ರೂ. ಕಳೆದುಕೊಂಡೆ. ಅಂದು ನಾನು ಮಾಡಿದ ಅಷ್ಟು ಸಂಪಾದನೆಯನ್ನೇ ಕಳ್ಕೊಂಡೆ ಎಂದರು.
‘ಸಿನಿಮಾ ನೋಡಿದ ನಮ್ಮ ತಂದೆ ಆಗ ಆಸ್ಪತ್ರೆಯಲ್ಲಿದ್ದರು. ಆದ್ರೂ ಶಾಂತಿ-ಕ್ರಾಂತಿ ತೋರಿಸಿದೆ. ನಿನ್ನ ತಪ್ಪು ನಿನಗೆ ಗೊತ್ತಾದರೆ, ನೀನು ಮುಂದೆ ಬೆಳೆವಣಿಗೆ ನೋಡ್ತ್ಯಾ. ಆದ್ರೂ ನೀನೊಬ್ಬ ಒಳ್ಳೆಯ ನಿರ್ದೇಶಕ ಕಣೋ ಎಂದರು. ಆ ಕ್ಷಣವೇ ನಾನು ನಮ್ಮ ಅಪ್ಪನಿಗೆ ಒಂದು ಮಾತು ಕೊಟ್ಟೆ, ನನ್ ಸೋಲು ನೋಡಿ, ಅವರನ್ನು ಅಳುತ್ತ ಕಳಿಸಿಕೊಡಬಾರದು ಎಂದು ನಿರ್ಧರಿಸಿ, ‘ರಾಮಾಚಾರಿ’ ಮಾಡಿ, ಸಕಸ್ಸ್ ಕಂಡೆ. ಅದನ್ನು ತಂದೆಗೆ ತೋರಿಸಿ, ಅವರನ್ನು ಖುಷಿಯಿಂದಲೇ ಕಳಿಸಿಕೊಟ್ಟೆ’ ಎಂದು ರವಿಚಂದ್ರನ್ ಭಾವುಕರಾದರು.