ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಪಡೆದಿರುವ ಬಾಲಿವುಡ್ ಬಾದ್ ಶಾ ಎಂದಿಗೂ ಎಲ್ಲೆ ಮೀರಿ ನಡೆದುಕೊಂಡಿದ್ದೇ ಇಲ್ಲ. ಆದರೆ, ಇತ್ತೀಚೆಗೆ ಅವರು ಮಾತನಾಡಿದ ರೀತಿ ಅನೇಕರಿಗೆ ಇಷ್ಟ ಆಗಿಲ್ಲ. ರಾಮ್ ಚರಣ್ ಅವರನ್ನು ‘ಇಡ್ಲಿ ವಡಾ’ ಎಂದು ಕರೆಯುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ರಾಮ್ ಚರಣ್ ಆಪ್ತ ಬಳಗದವರೇ ಈ ಬಗ್ಗೆ ಅಪಸ್ವರ ಎತ್ತಿದ್ದಾರೆ.
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಶಾರುಖ್ ಖಾನ್, ಆಮಿರ್ ಖಾನ್ ಹಾಗೂ ಸಲ್ಮಾನ್ ಖಾನ್ ಆಗಮಿಸಿದ್ದರು. ಇವರು ಒಟ್ಟಾಗಿ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆದರೆ, ಅಂದುಕೊಂಡಂತೆ ಹೆಜ್ಜೆ ಹಾಕೋಕೆ ಸಾಧ್ಯವಾಗಿಲ್ಲ. ಹೀಗಾಗಿ, ಶಾರುಖ್ ಖಾನ್ ರಾಮ್ ಚರಣ್ ಅವರನ್ನು ಕರೆಯಲು ಪ್ರಯತ್ನಿಸಿದರು. ಶಾರುಖ್ ಖಾನ್ ಅವರು ತಮಿಳಿನಲ್ಲಿ ಏನೇನೋ ಮಾತನಾಡಿದಂತೆ ಆಯಕ್ಟ್ ಮಾಡಿ ‘ಇಡ್ಲಿ ವಡಾ ರಾಮ್ ಚರಣ್ ಎಲ್ಲಿದ್ದೀರಿ’ ಎಂದು ಕೂಗಿದ್ದಾರೆ. ಇದಕ್ಕೆ ಟೀಕೆ ವ್ಯಕ್ತವಾಗಿದೆ.
ರಾಮ್ ಚರಣ್ ಪತ್ನಿ ಉಪಾಸನಾ ಅವರ ಮೇಕಪ್ ಆರ್ಟಿಸ್ಟ್ ಜೆಬಾ ಹಸನ್ ಇದನ್ನು ಖಂಡಿಸಿದ್ದಾರೆ. ‘ಇದರ ನಂತರ ನಾನು ಹೊರನಡೆದೆ. ರಾಮ್ ಚರಣ್ನಂಥ ಸ್ಟಾರ್ಗೆ ತುಂಬಾ ಅಗೌರವ’ ಎಂದು ಬರೆದುಕೊಂಡಿದ್ದಾರೆ. ಜೆಬಾ ಅವರ ಹೇಳಿಕೆಯನ್ನು ಅನೇಕರು ಬೆಂಬಲಿಸಿದ್ದಾರೆ. ‘ದಕ್ಷಿಣದ ಸ್ಟಾರ್ಗಳನ್ನು ಟೀಕಿಸುವ ಕೆಲಸ ಮೊದಲಿನಿಂದಲೂ ಆಗುತ್ತಲೇ ಇದೆ. ಆಸ್ಕರ್ ಗೆದ್ದ ಸಿನಿಮಾದ ನಟನಿಗೂ ಈ ರೀತಿ ಅಗೌರವ ಸೂಚಿಸೋದು ಎಷ್ಟು ಸರಿ’ ಎಂದು ಅನೇಕರು ಪ್ರಶ್ನಿಸಿದ್ದಾರೆ.