ರಾಯಚೂರು: ಕೆಲ ತಿಂಗಳ ಹಿಂದೆ ಗಗನಕ್ಕೇರಿದ್ದ ಟೊಮೆಟೊ ಬೆಲೆ (Tomato Price) ಈಗ ಪಾತಾಳಕ್ಕೆ ಕುಸಿದಿದೆ. ಫಸಲಿಗೆ ಖರ್ಚು ಮಾಡಿದಷ್ಟು ಆದಾಯವೂ ಬಾರದ ಹಿನ್ನೆಲೆ ರಾಯಚೂರಿನಲ್ಲಿ ರೈತರು (Raichur Farmers) ಸ್ವತಃ ತಾವು ಬೆಳೆದ ಬೆಳೆಯನ್ನ ತಾವೇ ಹಾಳು ಮಾಡುತ್ತಿದ್ದಾರೆ. ಬರಗಾಲ, ಬೆಲೆ ಇಳಿಕೆಯ ಒತ್ತಡಕ್ಕೆ ಟೊಮೆಟೊ ಬೆಳೆಗಾರರ ಬದುಕು ಬೀದಿಗೆ ಬರುವ ಹಂತಕ್ಕೆ ತಲುಪಿದೆ
ರಾಯಚೂರು ಜಿಲ್ಲೆಯಲ್ಲಂತೂ ರೈತರು ಮಾರುಕಟ್ಟೆಗೆ ಟೊಮೆಟೊ (Tomato Crop) ತೆಗೆದುಕೊಂಡು ಹೋದ್ರೆ ಸಾಗಣೆ ಖರ್ಚು ಸಹ ವಾಪಸ್ ಬರುವುದಿಲ್ಲ ಅಂತ ತಮ್ಮ ಬೆಳೆಯನ್ನ ತಾವೇ ನಾಶ ಮಾಡುತ್ತಿದ್ದಾರೆ. ಎಕರೆಗೆ 50 ಸಾವಿರ ರೂ.ನಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೈತರು ಟೊಮೆಟೊ ಬೆಳೆದಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಕೂಲಿ ಆಳುಗಳಿಗೂ ನೀಡಬೇಕಾದಷ್ಟು ಹಣವೂ ಬರುತ್ತಿಲ್ಲ, ಬೆಳೆದ ಫಸಲಿನೊಂದಿಗೆ ಸಾಲ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇದರಿಂದ ತಾವೇ ಬೆಳೆದ ಬೆಳೆಯನ್ನು ಕುರಿಗಳಿಗೆ ಮೇಯಿಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ 25 ಕೆಜಿಯ ಒಂದು ಕ್ರೇಟ್ 50 ರೂ.ಗೆ ಕೇಳೋರಿಲ್ಲ. ಒಂದು ಕ್ರೇಟ್ ಬಾಡಿಗೆ 3 ರೂ. ಇದ್ದರೆ, ರೈತರಿಗೆ ಕೇವಲ 2 ರೂ. ಸಿಗುತ್ತಿದೆ. ಆದ್ರೆ ರೈತರಿಂದ ಕೊಂಡುಕೊಂಡವರು ಕೆಜಿ 20 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕಷ್ಟ ಪಟ್ಟು ಬೆಳೆ ಬೆಳೆದ ರೈತರಿಗೆ ಮಾತ್ರ ಸಾಲದ ಹೊರೆ ಹೆಚ್ಚಾಗುತ್ತಿದೆ. ಹೀಗಾಗಿ ರೈತರು ಕುರಿಗಳಿಗಾದರೂ ಮೇವಾಗಲಿ ಅಂತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಯನ್ನ ಮೇವಿಗೆ ಬಿಡುತ್ತಿದ್ದಾರೆ.
ಬೆಲೆ ಕುಸಿತ ಒಂದು ಕಡೆಯಾದ್ರೆ ಬರಗಾಲದಿಂದ ನೀರಿನ ಕೊರತೆ ಎದುರಾಗಿದ್ದು ಬೆಳೆಗೆ ರೋಗ ಭಾದೆಯೂ ಕಾಡುತ್ತಿದೆ. ಇದರಿಂದ ಬೇಸತ್ತ ರಾಯಚೂರು ತಾಲೂಕಿನ ಕಡಗಂದೊಡ್ಡಿ, ಚಂದ್ರಬಂಡ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ಗುಳೆ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ