ಕಳಪೆ ಪ್ರದರ್ಶನ ಹಿನ್ನೆಲೆ, ಲೀಗ್ನಲ್ಲಿ ಆರ್ಸಿಬಿಗೆ ಸತತ 2ನೇ ಹೀನಾಯ ಸೋಲು ಉಂಟಾಗಿದೆ.
ಬೆಂಗಳೂರು ತಂಡವನ್ನು 7 ವಿಕೆಟ್ಗಳಿಂದ ಮಣಿಸಿದ ಮುಂಬೈ ಇಂಡಿಯನ್ಸ್ ತಂಡ ಲೀಗ್ನಲ್ಲಿ ಮೂರನೇ ಜಯ ದಾಖಲಿಸಿ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 131 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಆರಂಭಿಕರ ಸ್ಫೋಟಕ ಬ್ಯಾಟಿಂಗ್ನಿಂದಾಗಿ 15 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 14 ರನ್ಗಳಿರುವಾಗ ನಾಯಕಿ ಸ್ಮೃತಿ ಮಂಧಾನ ಕೇವಲ 9 ರನ್ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಅವರ ಹಿಂದೆ ಬಂದ ಮೇಘನಾ ಕೂಡ 11 ರನ್ಗಳಿಗೆ ಬ್ಯಾಟ್ ಎತ್ತಿಟ್ಟರು. ಸೋಫಿ ಡಿವೈನ್ ಇನ್ನಿಂಗ್ಸ್ ಕೂಡ 9 ರನ್ಗಳಿಗೆ ಅಂತ್ಯಗೊಂಡಿತು. ಸ್ಫೋಟಕ ಬ್ಯಾಟರ್ ರಿಚಾ ಘೋಷ್ ಆಟವೂ 7 ರನ್ಗಳಿಗೆ ಕೊನೆಗೊಂಡಿತು. ಹೀಗಾಗಿ ತಂಡ 42 ರನ್ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಎಲ್ಲಿಸಾ ಪೆರ್ರಿ 38 ಎಸೆತಗಳಲ್ಲಿ 5 ಬೌಂಡರಿ ಸಹಿತ 44 ರನ್ಗಳ ಇನ್ನಿಂಗ್ಸ್ ಆಡಿದರು. ಕೆಳಕ್ರಮಾಂಕದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿದ ಜಾರ್ಜಿಯಾ ವೇರ್ಹ್ಯಾಮ್ 3 ಬೌಂಡರಿ ಸಹಿತ 27 ರನ್ಗಳ ಕಾಣಿಕೆ ನೀಡಿದರು. ಈ ಇಬ್ಬರ ಆಟದಿಂದಾಗಿ ತಂಡ 131 ರನ್ ಕಲೆಹಾಕಲು ಸಾಧ್ಯವಾಯಿತು. ಮುಂಬೈ ಪರ ಬೌಲಿಂಗ್ನಲ್ಲಿ ಮಿಂಚಿದ ನ್ಯಾಟ್ ಸ್ಕಿವರ್-ಬ್ರಂಟ್ ಹಾಗೂ ಪೂಜಾ ವಸ್ತಾಕರ್ ತಲಾ 2 ವಿಕೆಟ್ ಪಡೆದರು.
ಆರ್ಸಿಬಿ ತಂಡವನ್ನು ಅಲ್ಪರನ್ಗಳಿಗೆ ಕಟ್ಟಿಹಾಕಿ ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ಯಾಸ್ತಿಕಾ ಭಾಟಿಯಾ ಹಾಗೂ ಹೇಲಿ ಮ್ಯಾಥ್ಯೂಸ್ ಸ್ಫೋಟಕ ಆರಂಭ ಒದಗಿಸಿದರು. ಈ ಇಬ್ಬರು ಮೊದಲ ವಿಕೆಟ್ಗೆ 45 ರನ್ಗಳ ಜೊತೆಯಾಟ ಕೂಡ ಹಂಚಿಕೊಂಡರು. ಈ ಹಂತದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಯಾಸ್ತಿಕಾ ಕೇವಲ 15 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 31 ರನ್ ಸಿಡಿಸಿದರೆ, ಹೇಲಿ ಮ್ಯಾಥ್ಯೂಸ್ 26 ರನ್ಗಳ ಕೊಡುಗೆ ನೀಡಿದರು. ನಾಯಕಿ ನ್ಯಾಟ್ ಸ್ಕಿವರ್-ಬ್ರಂಟ್ ಇನ್ನಿಂಗ್ಸ್ 27 ರನ್ಗಳಿಗೆ ಕೊನೆಗೊಂಡಿತು. ಅಮೆಲಿಯಾ ಕೆರ್ ಅಜೇಯ 40 ರನ್ ಬಾರಿಸಿದರೆ, ಪೂಜಾ ವಸ್ತ್ರಕರ್ ಅಜೇಯ 8 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.