ಡೆಲ್ಲಿ ಕ್ಯಾಪಿಟಲ್ ವಿರುದ್ಧ 25 ರನ್ ಗಳ ಅಂತರದಲ್ಲಿ RCB ಮೊದಲ ಸೋಲು ಕಂಡಿದೆ. ಸತತ ಎರಡು ಪಂದ್ಯ ಗೆದ್ದಿದ್ದ RCB ಗೆ ಇದು ಮೊದಲ ಸೋಲಾಗಿದೆ.
ಆರ್ಸಿಬಿ ವಿರುದ್ಧ 25 ರನ್ಗಳ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ 4 ಅಂಕದೊಂದಿಗೆ ಮೊದಲ ಸ್ಥಾನಕ್ಕೆ ಜಿಗಿದರೆ ಬೆಂಗಳೂರು ಎರಡನೇ ಸ್ಥಾನಕ್ಕೆ ಜಾರಿದೆ.
ಗೆಲ್ಲಲು 195 ರನ್ಗಳ ಕಠಿಣ ಗುರಿಯನ್ನು ಪಡೆದ ಆರ್ಸಿಬಿ ಮಧ್ಯಮ ಕ್ರಮಾಂಕದ ಕುಸಿತದಿಂದಾಗಿ 20 ಓವರ್ಗಳಲ್ಲಿ 169 ರನ್ಗಳಿಗೆ ಆಲೌಟ್ ಆಗಿದೆ.
ಆರ್ಸಿಬಿ ಆರಂಭ ಉತ್ತಮವಾಗಿತ್ತು. ನಾಯಕಿ ಸ್ಮೃತಿ ಮಂಧಾನ ಮತ್ತು ಸೋಫಿ ಡಿವೈನ್ ಮೊದಲ ವಿಕೆಟಿಗೆ 77 ರನ್ ಜೊತೆಯಾಟವಾಡಿದ್ದರು. 11.6 ಓವರಿಗೆ 112 ರನ್ಗಳಿಗೆ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಸ್ಮೃತಿ ಔಟಾದ ನಂತ ಕುಸಿತ ಆರಂಭವಾಯಿತು
ಸ್ಮೃತಿ ಮಂಧಾನ 74 ರನ್(43 ಎಸೆತ, 10 ಬೌಂಡರಿ, 3 ಸಿಕ್ಸರ್), ಸೋಫಿ ಡಿವೈನ್ 23 ರನ್ (17 ಎಸೆತ, 1 ಬೌಂಡರಿ, 2 ಸಿಕ್ಸರ್), ಸಬ್ಬಿನೇನಿ ಮೇಘನಾ 36 ರನ್(31 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಪರವಾಗಿ ಶಫಾಲಿ ವರ್ಮಾ 50 ರನ್( 31 ಎಸೆತ, 3 ಬೌಂಡರಿ, 4 ಸಿಕ್ಸರ್), ಆಲಿಸ್ ಕ್ಯಾಪ್ಸಿ 46 ರನ್ ( 33 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು.
ಕೊನೆಯಲ್ಲಿ ಮಾರಿಜಾನ್ನೆ ಕಪ್ ಮತ್ತು ಜೆಸ್ ಜೊನಾಸೆನ್ 22 ಎಸೆತಗಳಲ್ಲಿ 48 ರನ್ ಚಚ್ಚಿದರು. ಮಾರಿಜಾನ್ನೆ ಕಪ್ 32 ರನ್ (16 ಎಸೆತ, 2 ಬೌಂಡರಿ, 3 ಸಿಕ್ಸರ್), ಜೆಸ್ ಜೊನಾಸೆನ್ ಔಟಾಗದೇ 36 ರನ್(16 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದ ಪರಿಣಾಮ ತಂಡದ ಮೊತ್ತ 190ರ ಗಡಿ ದಾಟಿತು.