ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ ವರದಿ ಅಧಿಕೃತವಾಗಿಸರ್ಕಾರದ ಕೈ ಸೇರಿದ್ದು, ರಾಜ್ಯಾದ್ಯಂತ ಬಿಸಿ ಬಿಸಿ ಚರ್ಚೆಗೆ ಆಸ್ಪದ ಒದಗಿಸಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಟ್ಟು 200 ಪುಟ ಹಾಗೂ 48 ಸಂಪುಟಗಳ ವರದಿಯನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಹಸ್ತಾಂತರ ಮಾಡಿದ್ದಾರೆ. ಪ್ರಬಲ ಸಮುದಾಯಗಳಿಗಿಂತ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ (ಅಹಿಂದ ವರ್ಗ) ಜನಸಂಖ್ಯೆಯೇ ಅಧಿಕವಾಗಿರುವುದು ವರದಿಯ ಸಾರ.ಒಟ್ಟು 5.98 ಕೋಟಿ ಜನ ಸಮೀಕ್ಷೆಗೆ ಒಳಪಟ್ಟಿದ್ದು, ಅವರಲ್ಲಿ 32 ಲಕ್ಷ ಜನ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ.
ಮೂಲಗಳ ಪ್ರಕಾರ, ರಾಜ್ಯದಲ್ಲಿ ದಲಿತರೇ ಹೆಚ್ಚಾಗಿದ್ದು, ಕುರುಬ ಜನಾಂಗವೇ ಅತಿ ಹಿಂದುಳಿದ ಸಮುದಾಯವಾಗಿದೆ. ರಾಜ್ಯದ ಒಟ್ಟಾರೆ ಜನಸಂಖ್ಯೆ 5.98 ಕೋಟಿ. ಈ ಪೈಕಿ ಅಹಿಂದ ವರ್ಗದವರು 3.96 ಕೋಟಿಯಷ್ಟಿದ್ದಾರೆ. ಲಿಂಗಾಯಿತ, ಒಕ್ಕಲಿಗ, ಬ್ರಾಹ್ಮಣ ಹಾಗೂ ಇತರರ ಸಂಖ್ಯೆ 1.87 ಕೋಟಿಯಷ್ಟಿದೆ.
ಒಟ್ಟು ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 1.08 ಕೋಟಿ, ಪರಿಶಿಷ್ಟ ಪಂಗಡದ 40.45 ಲಕ್ಷ, ಮುಸ್ಲಿಮರು 70 ಲಕ್ಷ ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದ ಕುರುಬರು 45 ಲಕ್ಷ ಸಂಖ್ಯೆಯಲ್ಲಿದ್ದಾರೆ. ಒಟ್ಟು 816 ಇತರ ಹಿಂದುಳಿದ ಜಾತಿಗಳೆಂದು ಗುರುತಿಸಲಾಗಿದೆ. ಒಟ್ಟು 1,351 ಜಾತಿಗಳನ್ನು ಸಮೀಕ್ಷೆಯಡಿ ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು, ಹೊಸದಾಗಿ 192 ಜಾತಿಗಳನ್ನ ದಾಖಲಿಸಲಾಗಿದೆ. 10ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 80 ಜಾತಿಗಳ ಹೆಸರನ್ನು ವರದಿಯಲ್ಲಿ ದಾಖಲಿಸಲಾಗಿದೆ. ಸುಮಾರು 30 ಜಾತಿಗಳು ಅತ್ಯಂತ ಹಿಂದುಳಿದ ಜಾತಿ ವರ್ಗದಡಿ ಸೇರಲಿವೆ.
ಸಾಮಾಜಿಕ, ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ಜಾತಿ ಜನಗಣತಿ ಮಾಡಲು ಹೊರಟಾಗ ಪರ, ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಸಮೀಕ್ಷಾ ಕಾರ್ಯ ವೈಜ್ಞಾನಿಕವಾಗಿ ನಡೆದಿಲ್ಲವೆಂಬ ಟೀಕೆಯೂ ಕೇಳಿಬಂದಿತ್ತು.
2015-16ರಲ್ಲಿ ಸಮೀಕ್ಷೆ:
ಸಿದ್ದರಾಮಯ್ಯ ಅವರು ಮೊದಲ ಬಾರಿ ಸಿಎಂ ಆಗಿದ್ದ ಸಂದರ್ಭದಲ್ಲಿ 154 ಕೋಟಿ ರೂ. ವೆಚ್ಚದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಂದ ವಿರೋಧ ವ್ಯಕ್ತವಾದ ಕಾರಣ ಹಿಂದಿನ ಅವಧಿಯಲ್ಲಿ ಬಿಡುಗಡೆ ಮಾಡಿರಲಿಲ್ಲ. ವರದಿಯು ಲೋಪದೋಷಗಳಿಂದ ಕೂಡಿದ್ದು, ಮನೆ ಮನೆಗೆ ತೆರಳಿ ಸರಿಯಾದ ಮಾಹಿತಿ ಸಂಗ್ರಹಿಸಿಲ್ಲ. ವರದಿ ಅಧಿಕೃತ ವಾಗಿ ಸರ್ಕಾರಕ್ಕೆ ಸಲ್ಲಿಕೆಯಾ ಮಾಹಿತಿ ಸೋರಿಕೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ವಿರೋಧಾಭಾಸ:
ಸಾಮಾಜಿಕ, ಶೈಕ್ಷಣಿಕ ವರದಿಗೆ ರಾಜ್ಯದ ಪ್ರಬಲ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ. ಈಗಾಗಲೇ ಎರಡು ಸಮುದಾಯಗಳ ಮಠಾಧೀಶರು ಹೇಳಿದ್ದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸರ್ಕಾರದ ಹಲವು ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿಯ ವರನ್ನು ಭೇಟಿ ಮಾಡಿ ವರದಿಗೆ ವಿರೋಧ ವ್ಯಕ್ತಪಡಿಸಿ ಮನವಿ ಪತ್ರ ಸಲ್ಲಿಸಿದ್ದರು.
ದಲಿತ, ಸಣ್ಣ ಸಮುದಾಯಗಳ ಸ್ವಾಗತ: ದಲಿತ ಸಂಘಟನೆಗಳು ಹಾಗೂ ರಾಜ್ಯದ ಕೆಲವು ಸಣ್ಣ ಸಮುದಾಯಗಳು ಸಾಮಾ ಜಿಕ, ಶೈಕ್ಷಣಿಕ ವರದಿ ಬಿಡುಗಡೆಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದವು. ವರದಿಗೆ ಬೆಂಬಲಿಸಿರುವ ಈ ಸಮುದಾಯಗಳ ಮುಖಂಡರು, ಮಠಾಧೀಶರುಗಳ ನಿಯೋಗಗಳು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಶೀಘ್ರದಲ್ಲೇ ವರದಿಯನ್ನು ಸ್ವೀಕರಿಸಿ, ಬಹಿರಂಗಪಡಿಸಿ, ಅದರಲ್ಲಿನ ಅಂಶಗಳನ್ನು ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿದ್ದರು.
ಇದರ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿಯನ್ನು ಸ್ವೀಕಾರ ಮಾಡಿದ್ದು, ಇದೀಗ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಸಿದ ಬಳಿಕ ಮುಂದಿನ ನಿಧಾರವನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.
ಜಾತಿವಾರು ಜನಸಂಖ್ಯೆ
* ಪರಿಶಿಷ್ಟ ಜಾತಿ(ಎಸ್’ಸಿ)ಯವರ ಸಂಖ್ಯೆ 1.08 ಕೋಟಿ
* ಪರಿಶಿಷ್ಟ ಪಂಗಡ(ಎಸ್’ಟಿ)ದವರ ಪ್ರಮಾಣ 40.45 ಲಕ್ಷ
* ಮುಸ್ಲಿಮರು 70 ಲಕ್ಷ
* ಲಿಂಗಾಯತ: 65 ಲಕ್ಷ
* ಒಕ್ಕಲಿಗ: 60 ಲಕ್ಷ
* ಕುರುಬರು 45 ಲಕ್ಷ
* ಈಡಿಗ: 15 ಲಕ್ಷ
* ವಿಶ್ವಕರ್ಮ: 15
* ಬೆಸ್ತ: 15 ಲಕ್ಷ
* ಬ್ರಾಹ್ಮಣ: 14 ಲಕ್ಷ
* ಗೊಲ್ಲ(ಯಾದವ) 10 ಲಕ್ಷ
* ಮಡಿವಾಳ ಸಮಾಜ: 6
* ಅರೆ ಅಲೆಮಾರಿ 6 ಲಕ್ಷ
* ಕುಂಬಾರ 5 ಲಕ್ಷ
* ಸವಿತಾ ಸಮಾಜ 5 ಲಕ್ಷ
—————-
ವರದಿ ಹೈಲೈಟ್ಸ್:
* ಒಟ್ಟು 5.98 ಕೋಟಿ ಮಂದಿಯ ಸಮೀಕ್ಷೆ
* ಸಮೀಕ್ಷೆಯಿಂದ ಹೊರಗುಳಿದವರ ಪ್ರಮಾಣ 32 ಲಕ್ಷ
* ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ
* ಕರ್ನಾಟಕದಲ್ಲಿ ದಲಿತರ ಪ್ರಮಾಣವೇ ಹೆಚ್ಚು
* ಕುರುಬರೇ ಅತ್ಯಂತ ಹಿಂದುಳಿದ ವರ್ಗ
* ಸಮೀಕ್ಷೆಗೊಳಪಟ್ಟ ಜಾತಿಗಳ ಸಂಖ್ಯೆ 1,351
* ಹೊಸದಾಗಿ ದಾಖಲಾದ ಜಾತಿಗಳ ಸಂಖ್ಯೆ 192
* ಸರಕಾರ ಗುರುತಿಸಿರುವ ಇತರೆ ಹಿಂದುಳಿದ ಜಾತಿಗಳು(ಓಬಿಸಿ) 816
* 10ಕ್ಕಿಂತ ಕಡಿಮೆ ಜನಸಂಖ್ಯೆ ದಾಖಲಾಗಿರುವ ಜಾತಿಗಳ ಪ್ರಮಾಣ 80