ಗಾಜಾಪಟ್ಟಿಯಲ್ಲಿ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಸೇನೆ ನಡೆಸುತ್ತಿರುವ ಯುದ್ಧದಲ್ಲಿ ಭಾರತ ಮೂಲದ 19 ವರ್ಷದ ಯೋಧನೋರ್ವ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತ ಯೋಧನನ್ನು 19 ವರ್ಷದ ಸಾರ್ಜೆಂಟ್ ಓಜ್ ಡೇನಿಯಲ್ ಎಂದು ಗುರುತಿಸಲಾಗಿದೆ. ಹಮಾಸ್ ಜೊತೆಗಿನ ಇಸ್ರೇಲಿ ಯೋಧರ ಸಂಘರ್ಷ 143ನೇ ದಿನಕ್ಕೆ ಕಾಲಿಟ್ಟಿದ್ದು, ಈ ವೇಳೆ ಭಾರತೀಯ ಮೂಲದ 19 ವರ್ಷದ ಇಸ್ರೇಲಿ ಯೋಧ ಮೃತಪಟ್ಟಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಘೋಷಿಸಿದೆ.
“ಭಾರತೀಯ ಮೂಲದವರು ಮತ್ತು ಅಕ್ಟೋಬರ್ 7 ರಂದು ಗಾಜಾಕ್ಕೆ ಅಪಹರಿಸಲ್ಪಟ್ಟ ಸಾರ್ಜೆಂಟ್ ಓಜ್ ಡೇನಿಯಲ್ ಅವರು ಸತ್ತಿದ್ದಾರೆ ಎಂದು ಘೋಷಿಸಲಾಗಿದೆ” ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ತಿಳಿಸಿದ್ದಾರೆ.
ಅಕ್ಟೋಬರ್ 7, 2023 ರಂದು ಹಮಾಸ್ ಅಪಹರಿಸಿದ 253 ಒತ್ತೆಯಾಳುಗಳಲ್ಲಿ ಡೇನಿಯಲ್ ರನ್ನೂ ಕೂಡ ಪಟ್ಟಿಮಾಡಲಾಗಿತ್ತು. ಗುಪ್ತಚರ ವರದಿಗಳ ಆಧಾರದ ಮೇಲೆ ಸೇನೆಯ ಮುಖ್ಯ ರಬ್ಬಿ ಡೇನಿಯಲ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ. ವರದಿಗಳ ಪ್ರಕಾರ ಡೇನಿಯಲ್ ದೇಹ ಇನ್ನೂ ಗಾಜಾದಲ್ಲಿದ್ದು, ಗಾಜಾದಲ್ಲಿ ಸುಮಾರು 130 ಒತ್ತೆಯಾಳುಗಳು ಇನ್ನೂ ಉಳಿದಿದ್ದಾರೆ. ಆದರೆ ಅವರಲ್ಲಿ ಎಷ್ಟು ಮಂದಿ ಬದುಕುಳಿದಿದ್ದಾರೆ ಎಂಬುದರ ಕುರಿತು ಯಾವುದೇ ವಿವರಗಳು ಲಭ್ಯವಿಲ್ಲ. ಗಾಜಾದಿಂದ ಇದುವರೆಗೆ 109 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.