ಯುಪಿ ವಾರಿಯರ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಡಬ್ಲ್ಯೂಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಗೆಲ್ಲಲು 162 ರನ್ಗಳ ಗುರಿಯನ್ನು ಪಡೆದ ಯುಪಿ ಇನ್ನೂ 21 ಎಸೆತ ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು 163 ರನ್ ಹೊಡೆಯುವ ಮೂಲಕ ಜಯಗಳಿಸಿತು
ಆರಂಭಿಕ ಆಟಗಾರ್ತಿ ಕಿರಣ್ ನವಗಿರೆ (Kiran Navgire) ಅವರ ಸ್ಫೋಟಕ ಅರ್ಧಶತಕದ ಜೊತೆ ಕೊನೆಯಲ್ಲಿ ಗ್ರೇಸ್ ಹ್ಯಾರಿಸ್ ಮತ್ತು ದೀಪ್ತಿ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಯುಪಿ ತಂಡ ವಿಜಯದ ನಗೆ ಬೀರಿತು.
ನಾಯಕಿ ಅಲಿಸ್ಸಾ ಹೀಲಿ 33 ರನ್ (29 ಎಸೆತ, 5 ಬೌಂಡರಿ), ಕಿರಣ್ ನವಗಿರೆ 57 ರನ್ (31 ಎಸೆತ, 6 ಬೌಂಡರಿ, 4 ಸಿಕ್ಸರ್), ಗ್ರೇಸ್ ಹ್ಯಾರಿಸ್ (Grace Harris) ಔಟಾಗದೇ 38 ರನ್ (17 ಎಸೆತ, 6 ಬೌಂಡರಿ, 1 ಸಿಕ್ಸರ್), ದೀಪ್ತಿ ಶರ್ಮಾ (Deepti Sharma) ಔಟಾಗದೇ 27 ರನ್(20 ಎಸೆತ, 4 ಬೌಂಡರಿ) ಹೊಡೆದರು
ಒಂದು ಹಂತದಲ್ಲಿ ಯುಪಿ ಗೆಲುವಿಗೆ 54 ಎಸೆತದಲ್ಲಿ 64 ರನ್ ಬೇಕಿತ್ತು. ಈ ಹಂತದಲ್ಲಿ ಗ್ರೇಸ್ ಹ್ಯಾರಿಸ್ ಮತ್ತು ದೀಪ್ತಿ ಶರ್ಮಾ ಬೌಂಡರಿಗಳ ಸುರಿಮಳೆ ಸಿಡಿಸಿದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಹೇಲಿ ಮ್ಯಾಥ್ಯೂಸ್ ಮತ್ತು ಯಾಸ್ತಿಕಾ ಭಾಟಿಯಾ ಮೊದಲ ವಿಕೆಟಿಗೆ 50 ರನ್ ಜೊತೆಯಾಟವಾಡಿದರು.
ಯಾಸ್ತಿಕಾ ಭಾಟಿಯಾ 26 ರನ್ (22 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರೆ ಹೇಲಿ ಮ್ಯಾಥ್ಯೂಸ್ 55 ರನ್ (47 ಎಸೆತ, 9 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು. ನ್ಯಾಟ್ ಸ್ಕಿವರ್-ಬ್ರಂಟ್ 19 ರನ್ಗಳಿಸದಾಗ ರನೌಟ್ ಆದರೆ ಅಮೆಲಿಯಾ ಕೆರ್ 23 ರನ್ ಹೊಡೆದು ಔಟಾದರು.
ಮೂರು ಪಂದ್ಯವಾಡಿ ಒಂದು ಪಂದ್ಯ ಗೆದ್ದಿರುವ ಯುಪಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ ಮೊದಲ ಸ್ಥಾನದಲ್ಲಿದೆ.