ಕಳೆದ ಕೆಲವು ದಿನಗಳ ಹಿಂದೆ ಗಗನಮುಖಿಯಾಗಿದ್ದ ಬೆಳ್ಳುಳ್ಳಿ ಧಾರಣೆಯು ಇಳಿಕೆಯತ್ತ ಸಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ವರ್ಷದ ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿಯೇ ರಾಜ್ಯದ ವಿವಿಧ ಚಿಲ್ಲರೆ ಮಾರುಕಟ್ಟೆಗಳಲ್ಲಿ ಬೆಳ್ಳುಳ್ಳಿ ದರವು ಏರಿಕೆಯಾಗಿತ್ತು.
ಒಂದು ಕೆ.ಜಿ ಹೈಬ್ರೀಡ್ ಬೆಳ್ಳುಳ್ಳಿ ₹450 ಹಾಗೂ ನಾಟಿ ಬೆಳ್ಳುಳ್ಳಿ ದರವು ₹500 ದಾಟಿತ್ತು.
ಸದ್ಯ ಬೆಂಗಳೂರಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೈಬ್ರೀಡ್ ಬೆಳ್ಳುಳ್ಳಿಯ ಸಗಟು ಧಾರಣೆಯು ₹70ರಿಂದ ₹150ಕ್ಕೆ ಇಳಿಕೆಯಾಗಿದೆ. ‘ಎ’ ದರ್ಜೆಯ ಸರಕಿಗೆ ಮಾತ್ರವೇ ₹150 ದರವಿದೆ. ಹಾಗಾಗಿ, ಚಿಲ್ಲರೆ ಮಾರುಕಟ್ಟೆಯಲ್ಲಿ ದರವು ಕೆ.ಜಿಗೆ ₹250ಕ್ಕೆ ಇಳಿದಿದೆ.
ಆದರೆ, ಬೆಂಗಳೂರಿನ ಕೆಲವು ಪ್ರತಿಷ್ಠಿತ ಬಡಾವಣೆಗಳಲ್ಲಿ ಮಾತ್ರವೇ ಚಿಲ್ಲರೆ ವ್ಯಾಪಾರಿಗಳು ಈಗಲೂ ಕೆ.ಜಿಗೆ ₹300ಕ್ಕೆ ಮಾರಾಟ ಮಾಡುತ್ತಿದ್ದಾರೆ. ಉಳಿದೆಡೆ ಚಿಲ್ಲರೆ ಧಾರಣೆಯು ಗಣನೀಯವಾಗಿ ತಗ್ಗಿದೆ. ದಾಸ್ತಾನು ಇಟ್ಟುಕೊಂಡಿದ್ದ ಕೆಲವು ವ್ಯಾಪಾರಿಗಳು ದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಮುಂದಾಗಿಲ್ಲ ಎನ್ನುತ್ತಾರೆ ಸಗಟು ವ್ಯಾಪಾರಿಗಳು.