ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸುವ ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಧ್ರುವ್ ಜುರೆಲ್ ಆಟಕ್ಕೆ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಫಿದಾ ಆಗಿದ್ದಾರೆ. ಜುರೆಲ್ ಅವರ ಆಟವನ್ನು ಕೂಲ್ ಕ್ಯಾಪ್ಟನ್ ಎಂಎಸ್ ಧೋನಿಗೆ ಹೋಲಿಸಿದ್ದಾರೆ.
ದೇಶಿ ಕ್ರಿಕೆಟ್ ನಲ್ಲಿ ತಮ್ಮ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ನಿಂದ ಗಮನ ಸೆಳೆದಿದ್ದ ಧ್ರುವ್ ಜುರೆಲ್, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ನ ಪದಾರ್ಪಣೆ ಪಂದ್ಯದ ಮೊದಲ ಇನಿಂಗ್ಸ್ ನಲ್ಲೇ 46 ರನ್ ಬಾರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದ ಧ್ರುವ್ ಜುರೆಲ್, ರಾಂಚಿ ಟೆಸ್ಟ್ ಪಂದ್ಯದಲ್ಲೂ ಇಂಗ್ಲೆಂಡ್ ನ ಬೌಲರ್ ಗಳ ಮೇಲೆ ಪ್ರಾಬಲ್ಯ ಸಾಧಿಸಿ 149 ಎಸೆತಗಳಲ್ಲಿ 6 ಮನಮೋಹಕ ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಮೂಲಕ 90 ರನ್ ಗಳಿಸಿದ್ದಾನೆ.
ಜಿಯೋ ಸಿನಿಮಾ ಜೊತೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಲಿಟ್ಲ್ ಮಾಸ್ಟರ್ ಸುನೀಲ್ ಗವಾಸ್ಕರ್ ಅವರು ಧ್ರುವ್ ಜುರೆಲ್ ಅವರ ಆಲೋಚನಾ ಲಹರಿ ಗಮನಿಸಿದರೆ ಆತ ಭವಿಷ್ಯದ ಮಹೇಂದ್ರ ಸಿಂಗ್ ಧೋನಿ ಆಗುತ್ತಾರೆ ಎಂದು ಬಣ್ಣಿಸಿದ್ದಾರೆ.
“ನಿಜಕ್ಕೂ ಆತ ತುಂಬಾ ಚೆನ್ನಾಗಿ ಬ್ಯಾಟ್ ಮಾಡಿದ್ದಾನೆ. ಆತ ವಿಕೆಟ್ ಹಿಂದೆಯೂ ತುಂಬಾ ಸೊಗಸಾಗಿ ಕಂಡು ಬಂದಿದ್ದಾನೆ. ಆತನ ಆಟದ ಶೈಲಿಯನ್ನು ಒಮ್ಮೆ ಗಮನಹರಿಸಿದರೆ ಆತನಲ್ಲಿ ಭವಿಷ್ಯದ ಎಂಎಸ್ ಧೋನಿ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ನನಗೆ ಗೊತ್ತು ಟೀಮ್ ಇಂಡಿಯಾಗೆ ಮತ್ತೊಬ್ಬ ಧೋನಿ ಸಿಗಲಾರರು. ಆದರೆ ಆತ (ಧ್ರುವ್ ಜುರೆಲ್) ಅದೇ ರೀತಿಯ ಮನಸ್ಥಿತಿ ಹೊಂದಿದ್ದಾನೆ. ಎಂಎಸ್ ಡಿ ಕ್ರಿಕೆಟ್ ಜೀವನ ಆರಂಭಿಸಿದಾಗ ಇದೇ ರೀತಿ ಇದ್ದರು. ಜುರೆಲ್ ಅವರು ಅಂತಹ ಪ್ರೆಸೆನ್ಸ್ ಆಫ್ ಮೆಂಡ್ ಅನ್ನು ಪ್ರದರ್ಶಿಸಿದ್ದಾರೆ,” ಎಂದು ಮಾಜಿ ನಾಯಕ ಹೇಳಿದ್ದಾರೆ.