ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯುಪಿ ವಾರಿಯರ್ಸ್ ವಿರುದ್ಧ 2 ರನ್ಗಳ ರೋಚಕ ಜಯ ಸಾಧಿಸಿದೆ.
ಸೋಭಾನ ಆಶಾ ಸ್ಪಿನ್ ಜಾದು ಹಾಗೂ ರಿಚಾ ಘೋಷ್, ಮೇಘನಾ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯುಪಿ ವಾರಿಯರ್ಸ್ ವಿರುದ್ಧ 2 ರನ್ಗಳ ರೋಚಕ ಜಯ ಸಾಧಿಸಿತು. ಮೊದಲ ಆವೃತ್ತಿಯ ಆರಂಭಿಕ ಪಂದ್ಯಗಳಲ್ಲಿ ಫ್ಲಾಪ್ ಪ್ರದರ್ಶನ ನೀಡಿದ್ದ ಆರ್ಸಿಬಿ ತಂಡ ಈ ಬಾರಿ ಆರಂಭಿಕ ಪಂದ್ಯದಲ್ಲೇ ಗೆಲುವು ಸಾಧಿಸಿ, ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ.
ಕೊನೆಯ ಓವರ್ನಲ್ಲಿ ಯುಪಿ ವಾರಿಯರ್ಸ್ ಗೆಲುವಿಗೆ 11 ರನ್ಗಳ ಅಗತ್ಯವಿತ್ತು. ಕ್ರೀಸ್ನಲ್ಲಿದ್ದ ಸೋಫಿ ಎಕ್ಲೆಸ್ಟೋನ್ ಹಾಗೂ ದೀಪ್ತಿ ಶರ್ಮಾ ಜೋಡಿ ಮೊದಲ 4 ಎಸೆತಗಳಲ್ಲಿ ಕೇವಲ 2 ರನ್ ಕಲೆಹಾಕಿತು. 5ನೇ ಎಸೆತದಲ್ಲಿ ದೀಪ್ತಿ ಶರ್ಮಾ ಬೌಂಡರಿ ಬಾರಿಸಿದರು. ಕೊನೇ ಎಸೆತದಲ್ಲಿ 5 ರನ್ ಅಗತ್ಯವಿದ್ದಾಗ ಸೂಪರ್ ಓವರ್ ನಿರೀಕ್ಷಿಸಲಾಗಿತ್ತು. ಆದ್ರೆ ಬೌಲಿಂಗ್ನಲ್ಲಿದ್ದ ಸೋಫಿ ಮೊಲಿನೆಕ್ಸ್ 2 ರನ್ ಮಾತ್ರ ಬಿಟ್ಟುಕೊಟ್ಟಿದ್ದರಿಂದ ಆರ್ಸಿಬಿ 2 ರನ್ಗಳ ರೋಚಕ ಜಯ ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತ್ತು. 158 ರನ್ಗಳ ಗುರಿ ಬೆನ್ನತ್ತಿದ ಯುಪಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಸಾಧಾರಣ ಮೊತ್ತದ ಚೇಸಿಂಗ್ ಆರಂಭಿಸಿದ ಯುಪಿ ವಾರಿಯರ್ಸ್ ನಿಧಾನಗತಿಯಲ್ಲೇ ಬ್ಯಾಟಿಂಗ್ ಆರಂಭಿಸಿತ್ತಲ್ಲದೇ 8.3 ಓವರ್ಗಳಲ್ಲೇ 49 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಜೊತೆಗೂಡಿದ ಗ್ರೇಸ್ ಹ್ಯಾರಿಸ್, ಶ್ವೇತಾ ಸೆಹ್ರಾವತ್ ಜೋಡಿ 46 ಎಸೆತಗಳಲ್ಲಿ 77 ರನ್ಗಳ ಜೊತೆಯಾಟ ನೀಡಿತ್ತು. ಈ ವೇಳೆ ಸ್ಪಿನ್ ದಾಳಿ ನಡೆಸಿದ ಸೋಭಾನ ಆಶಾ ಇವರಿಬ್ಬರ ಆಟಕ್ಕೆ ಬ್ರೇಕ್ ಹಾಕಿದ್ರು. ಗ್ರೇಸ್ ಹ್ಯಾರಿಸ್ 38 ರನ್ ಗಳಿಸಿ ಪೆವಿಲಿಯನ್ಗೆ ಮರಳುತ್ತಿದ್ದಂತೆ, ಸೆಹ್ರಾವತ್ ಸಹ ವಿಕೆಟ್ ಕೈಚೆಲ್ಲಿದರು. ಆ ನಂತರ ಗೆಲುವು ಆರ್ಸಿಬಿಯತ್ತ ವಾಲಿತು.