ಉಕ್ರೈನ್ ವಿರುದ್ಧ ಹೋರಾಟ ಮಾಡಲು ರಷ್ಯಾ ಖಾಸಗಿ ಸೈನಿಕರು ಮತ್ತು ಕೈದಿಗಳನ್ನು ಬಳಸಿಕೊಂಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೆ ರಷ್ಯಾ ಹಲವು ಭಾರತೀಯ ಕಾರ್ಮಿಕರನ್ನು ಬಳಸಿಕೊಂಡಿರುವ ಆಘಾತಕಾರಿ ಅಂಶ ಕೂಡಾ ವರದಿಯಲ್ಲಿ ಬಹಿರಂಗಗೊಂಡಿದೆ.
ರಷ್ಯಾವು ಸೇನಾ ಭದ್ರತಾ ಸಹಾಯಕ ಹುದ್ದೆ ಎಂದು ನಂಬಿಸಿ ಭಾರತೀಯ ಏಜೆಂಟ್ ಮೂವರು ಭಾರತೀಯರನ್ನು ರಷ್ಯಾಕ್ಕೆ ಕಳುಹಿಸಿ ವಂಚಿಸಲಾಗಿತ್ತು. ಈ ಮೂವರನ್ನು ರಷ್ಯಾ ಉಕ್ರೈನ್ ವಿರುದ್ಧ ಯುದ್ಧದಲ್ಲಿ ಹೋರಾಡಲು ಬಳಸಿಕೊಂಡಿರುವುದಾಗಿ ತಿಳಿಸಿದೆ.
2023ರ ನವೆಂಬರ್ ಹೊತ್ತಿಗೆ ಅಂದಾಜು 18 ಮಂದಿ ಭಾರತೀಯರನ್ನು ರಷ್ಯಾ ಮತ್ತು ಉಕ್ರೈನ್ ಗಡಿಯ ವಿವಿಧ ಭಾಗಗಳಲ್ಲಿ ನಿಯೋಜಿಸಲಾಗಿತ್ತು. ಅವರಲ್ಲಿ ಒಬ್ಬರು ಯುದ್ಧದಲ್ಲಿ ಸಾವನ್ನಪ್ಪಿರುವುದಾಗಿ ವರದಿಯಲ್ಲಿ ಉಲ್ಲೇಖಿಸಿದೆ.
ವಂಚನೆಗೊಳಗಾಗಿರುವ ಹೈದರಾಬಾದ್ ನ ವ್ಯಕ್ತಿಯ ಕುಟುಂಬ ಸದಸ್ಯರೊಬ್ಬರು ಇದೀಗ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿಯ ಮೊರೆ ಹೋಗಿದ್ದು, ಈ ನಿಟ್ಟಿನಲ್ಲಿ ಓವೈಸಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಾಗೂ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಪತ್ರ ಬರೆದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಭಾರತೀಯರು ವಾಪಸ್ ಆಗಲು ನೆರವು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.