ವಿವಿಧ ಶಾಲೆಗಳ 8ರಿಂದ 18 ವರ್ಷದ ಮಕ್ಕಳಿಗಾಗಿ ನಡೆದಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಪಾಸಣೆಗೊಳಪಟ್ಟಂತಹ ಒಟ್ಟು 172 ಮಕ್ಕಳ ಪೈಕಿ 90 ಮಕ್ಕಳಲ್ಲಿ ತೀವ್ರ ತರಹದ ಹೃದಯ ಕಾಯಿಲೆ ಪತ್ತೆಯಾಗಿದೆ.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಬೆಂಗಳೂರಿನ ವೈದೇಹಿ ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ಚಿತ್ತಾಪುರ ಆರೋಗ್ಯ ಕೇಂದ್ರದಲ್ಲಿ ನಡೆಸಿದ ಆರ್ಬಿಎಸ್ಕೆ ಹಾಗೂ ವೈದೇಹಿ ಆಸ್ಪತ್ರೆ ಹೃದಯ, ನರರೋಗ ತಜ್ಞರ ವಿಶೇಷ ತಂಡ ಆರೋಗ್ಯ ತಪಾಸಣೆಯಲ್ಲಿ ಈ ಸಂಗತಿ ಹೊರಬಿದ್ದಿದೆ.
ತಪಾಸಣೆಗೊಳಪಟ್ಟ 172 ಮಕ್ಕಳಲ್ಲಿ 90 ಮಕ್ಕಳು ಹೃದಯ ಸಂಬಧಿತ ಕಾಯಿಲೆಯಿಂದ ನರಳುತ್ತಿದ್ದು, 41 ಮಕ್ಕಳಲ್ಲಿ ಹೃದಯ ಕಾಯಿಲೆ ತೀವ್ರವಾಗಿರೋದು ಕಂಡು ಬಂದಿದೆ. ಅವರಿಗೆ ತುರ್ತು ಹೃದಯ ಶಸ್ತ್ರ ಚಿಕಿತ್ಸೆಗೆ ವೈದೇಹಿ ಆಸ್ಪತ್ರೆ ಬೆಂಗಳೂರಿಗೆ ಶಿಫಾರಸ್ಸು ಮಾಡಲಾಗಿದೆ.
5 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಕೊರಗುತ್ತಿದ್ದು, ಇಬ್ಬರು ಮಕ್ಕಳಲ್ಲಿ ನರ ಸಂಬಂಧಿತ ಕಾಯಿಲೆ ಕಾಣಿಸಿಕೊಂಡಿದೆ. 34 ಮಕ್ಕಳು ಸಾಮಾನ್ಯ ಕಾಯಿಲೆಗೆ ತುತ್ತಾಗಿದ್ದಾರೆ. ಇದರಲ್ಲಿ 90 ಹೃದಯ ಸಮಸ್ಯೆಯ ಹಾಗೂ 41 ಮಕ್ಕಳಿಗೆ ಹೃದಯ ಶಸ್ತ್ರ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ.
ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿರುವ ಕಲಬುರಗಿ ಡಿಸಿ ಫೌಜಿಯಾ ತರನ್ನುಮ್ ಅವರು, ಅವಿಭಜಿತ ಚಿತ್ತಾಪುರ ತಾಲೂಕಿನಲ್ಲಿ ಅಂಗನವಾಡಿ ಕೇಂದ್ರ ಮಕ್ಕಳ ಹಾಗೂ ಶಾಲಾ ಮಕ್ಕಳಲ್ಲಿ ಕಂಡು ಬಂದ ಹೃದಯ, ನರ ಸಂಬಂಧಿತ ರೋಗಗಳು ಮಕ್ಕಳಿಗೆ ಸರ್ಕಾರದಿಂದ ಸೂಕ್ತ ಚಿಕಿತ್ಸೆ ಒದಗಿಸಲಾಗುವುದು ಎಂದಿದ್ದಾರೆ.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಆರ್ಬಿಎಸ್ಕೆಯ ವೈದ್ಯ ಮೂರು ತಂಡ ಶಹಾಬಾದ, ಚಿತ್ತಾಪುರ, ಕಾಳಗಿ ವ್ಯಾಪ್ತಿಯಲ್ಲಿ ಎಲ್ಲಾ ಅಂಗವಾಡಿ, ಕೇಂದ್ರ, ಶಾಲೆ, ಕಾಲೇಜಗಳಿಗೆ ಭೇಟಿ ನೀಡಿ, 8ರಿಂದ 18 ವರ್ಷದ ವರೆಗಿನ ಮಕ್ಕಳ ತಪಾಸಣೆ ನಡೆಸಿ, ಅವರದಲ್ಲಿ ವಿವಿಧ ರೀತಿಯ ತೀವ್ರ ಅನಾರೋಗ್ಯದಿಂದ ನರಳುತ್ತಿದ್ದ ಒಟ್ಟು 172 ಮಕ್ಕಳನ್ನು ಆಯ್ಕೆ ಮಾಡಿದ್ದು, ಅವರನ್ನು ಹೆಚ್ಚಿನ ತಪಾಸಣೆಗೆ ಕಲಬುರಗಿಯ ಜಯದೇವ (ಜಿಮ್ಸ್) ಆಸ್ಪತ್ರೆಗೆ ಕಳುಹಿಸಿ, ಅವರ ಶಿಫಾರಸು ಮೇರೆಗೆ ಬೆಂಗಳೂರಿನ ವೈದೇಹಿ ಆಸ್ಪತ್ರೆ ತಂಡದಿಂದ ತಪಾಸಣೆ ನಡೆಸಿ, ಅವರನ್ನು ಶಸ್ತ್ರ ಚಿಕಿತ್ಸೆ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ.
ಹೃದಯ ಸಂಬಂಧಿಸಿದ ಕಾಯಿಲೆಗಳು ಮಕ್ಕಳಿಗೆ ತಾಯಿಯ ಹೊಟ್ಟೆಯಲ್ಲಿಯೇ ಇದ್ದಾಗ ಇರುತ್ತವೆ. ಅಲ್ಲದೆ ಹುಟ್ಟಿದ ನಂತರ ಮಕ್ಕಳಲ್ಲಿ ಉಸಿರಾಟ, ರಕ್ತ ಸಂಚಲನದ ತೊಂದರೆ ಕಾಣಿಸಿಕೊಳ್ಳುತ್ತವೆ. ಮಕ್ಕಳು ಬೆಳೆದಾಗ ಕಫ ಕಟ್ಟುವುದು, ಸ್ವಲ್ಪ ಆಟವಾಡಿದರು ಆಯಾಸವಾಗುವುದು ಕಂಡು ಬರುತ್ತದೆ. ಆರ್ಬಿಎಸ್ಕೆ ತಂಡದಿಂದ ಪತ್ತೆ ಹಚ್ಚಿದ 90 ಹೃದಯ ಕಾಯಿಲೆ, 41 ಹೃದಯ ಶಸ್ತ್ರ ಚಿಕಿತ್ಸೆ ನರರೋಗದ ಮಕ್ಕಳಿಗೆ ಬೆಂಗಳೂರಿನ ವೈದೇಹಿ ಆಸ್ಪತ್ರೆ ತಂಡ ಈ ಮಕ್ಕಳನ್ನು ಆಧ್ಯತೆಯ ಮೇರೆಗೆ ಸ್ವತ: ಅವರೇ ಚಿತ್ತಾಪುರಕ್ಕೆ ಆಗಮಿಸಿ, ಕರೆದುಕೊಂಡು ಹೋಗಿ ಉಚಿತ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ನೀಡಲಿದ್ದಾರೆ.