ಭೂಗತ ಪಾತಕಿಯನ್ನ ಮದುವೆ ಮೆರವಣಿಗೆ ಸಂದರ್ಭದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿರುವ ಘಟನೆ ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದಿದೆ.
ಅಮೀರ್ ಬಾಲಾಜ್ ಟಿಪ್ಪು ಮೃತ ಭೂಗತ ಪಾತಕಿ. ಘಟನೆಯ ವೇಳೆ ಮದುವೆಗೆ ಬಂದಿರುವ ಅತಿಥಿಗಳಲ್ಲಿ ಮೂವರಿಗೆ ಗಾಯಗಳಾಗಿವೆ. ದಾಳಿಯಿಂದ ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಮೀರ್ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಡಪಡಿಸಿದ್ದಾರೆ.
ಮೃತ ಅಮೀರ್ ಎದೆಗೆ ನಾಲ್ಕು ಗುಂಡುಗಳು ತಗುಲಿದ್ದು, ಗುಂಡಿನ ದಾಳಿಯಿಂದಾಗಿ ತೀವ್ರ ರಕ್ತಸ್ರಾವವಾಗಿ ಅಮೀರ್ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಮೀರ್ ಸಾವಿನ ಸುದ್ದಿ ಬೆಂಬಲಿಗರನ್ನು ಕೆರಳಿಸಿದೆ. ಕೂಡಲೇ ಆಸ್ಪತ್ರೆಯ ಹೊರಗೆ ಅಮೀರ್ ಬೆಂಬಲಿಗರು ಜಮಾಯಿಸಿದರು. ಮಹಿಳೆಯರಂತೂ ತಮ್ಮ ಎದೆಗೆ ಹೊಡೆದುಕೊಂಡು ದುಷ್ಕರ್ಮಿಗಳ ಕೃತ್ಯ ಖಂಡಿಸಿದರು.
ಈ ದಾಳಿಗೆ ಕಾರಣವೇನು..? ಹಾಗೂ ದಾಳಿಯ ಹಿಂದಿನ ಉದ್ದೇಶವೇನು..?, ಯಾರು ಈ ದಾಳಿಯನ್ನು ಮಾಡಿದ್ದಾರೆ ಎಂಬುದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.