ಬಿಗ್ ಬಾಸ್ ಸೀಸನ್ 10ಕ್ಕೆ ಹೋಗಿ ಬಂದ ಬಳಿಕ ವರ್ತೂರು ಸಂತೋಷ್ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಅವರು ಹೋದಲ್ಲಿ ಬಂದಲ್ಲೆಲ್ಲಾ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಇದೀಗ ನಟ ಜಗ್ಗೇಶ್ ಕಾರ್ಯಕ್ರಮವೊಂದರಲ್ಲಿ ಸಂತೋಷ್ ಹೆಸರು ಹೇಳದೆ ಟೀಕಿಸಿದ್ದು ಈ ಬಗ್ಗೆ ವರ್ತೂರು ಸಂತೋಷ್ ಪ್ರತಿಕ್ರಿಯೆ ನೀಡಿದ್ದಾರೆ.
‘ರಂಗನಾಯಕ’ ಸಿನಿಮಾದ ಕಾರ್ಯಕ್ರಮದಲ್ಲಿ ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡಿದ್ದ ನಟ ಜಗ್ಗೇಶ್, ‘ನಾನು ಹುಲಿ ಥರಹ ಬದುಕಬೇಕು ಅಂತ ನಮ್ಮಮ್ಮ ಹುಲಿ ಉಗುರಿನ ಪೆಂಡೆಂಟ್ ಕೊಟ್ಟರು, ಆದರೆ ಯಾವನೋ ಕಿತ್ತೋದ್ ನನ್ ಮಗ ನಿಜವಾದ ಹುಲಿ ಉಗುರು ಹಾಕ್ಕೊಂಡು ಟಿವಿಗೆ ಹೋಗಿ ಅಲ್ಲಿ ತಗಲಾಕ್ಕೊಂಡ’ ಎಂದಿದ್ದರು. ಜಗ್ಗೇಶ್ ಸಹ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದು ಅವರ ಮನೆ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿ ಹುಲಿ ಉಗುರು ವಶಪಡಿಸಿಕೊಂಡಿದ್ದರು. ಇದರ ಬಗ್ಗೆ ಜಗ್ಗೇಶ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಗ್ಗೇಶ್ ಅವರು ವರ್ತೂರು ಸಂತೋಷ್ಗೆ ‘ಕಿತ್ತೋದ್ ನನ್ನ ಮಗ’ ಎಂಬ ಪದ ಬಳಸಬಾರದಿತ್ತು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದರು. ಜಗ್ಗೇಶ್ರ ಹೇಳಿಕೆಗೆ ಪ್ರತಿಕ್ರಿಯಿಸಿರುವ ವರ್ತೂರು ಸಂತೋಷ್, ‘ಬಿಡಿ ಅವರು ದೊಡ್ಡವರು. ನಾನು ಹೇಳಲಿಚ್ಛಿಸುವುದು ಇಷ್ಟೆ, ‘ಕಾಲೈ ತಸ್ಮೈ ನಮಃ’. ಎಲ್ಲಾದಕ್ಕೂ ಉತ್ತರ ಕೊಡಲೇ ಬೇಕು ಅಂತೇನೂ ಇಲ್ಲ. ಕೆಲವೊಂದಕ್ಕೆ ಉತ್ತರ ಕೊಡಬೇಕು. ಕೆಲವೊಂದಕ್ಕೆ ಮೌನವಾಗಿದ್ದರೆ ಸಾಕು ಉತ್ತರ ಸಿಗುತ್ತದೆ’ ಎಂದಿದ್ದಾರೆ.
‘ಸುದೀಪಣ್ಣನ ಬಳಿ ನಾನು ಕೆಲವೊಂದು ವಿಚಾರಗಳನ್ನು ಕಲಿತಿದ್ದೀನಿ. ಸುದೀಪಣ್ಣ ಒಂದು ಹೇಳ್ತಾರೆ. ವರ್ತೂರು ಅವ್ರೇ ಎಲ್ಲಾ ಜಾಗದಲ್ಲೂ ಮಾತನಾಡಬೇಕು ಅಂತಿಲ್ಲ. ಕೆಲವೊಮ್ಮೆ ಮಾತನಾಡದೇ ಸುಮ್ಮನಿದ್ದರೆ ಆ ಸೈಲೆಂಟ್ ಉತ್ತರ ಕೊಡುತ್ತೆ ಅಂತ. ಅಷ್ಟೇ ಸಾಕು. ಕೆಲವು ಜಾಗಗಳಲ್ಲಿ ಮಾತನಾಡಲೇಬೇಕು ಸಂದರ್ಭ ಆ ತರ ಇರುತ್ತದೆ. ತೂಕದ ಜೊತೆ ತೂಕವನ್ನು ಅಳೆಯಬೇಕಾದರೆ ತೂಕಕ್ಕೆ ತೂಕ ಸರಿ ಇರಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.