ಮಂಡ್ಯ:- ಓರ್ವ ಮಹಿಳೆ ಹಾಗೂ ಪುರುಷನ ಮೃತದೇಹ ಪತ್ತೆಯಾದ ಘಟನೆ ಜಿಲ್ಲೆಯ ಪಾಂಡವಪುರದ ಹಿರೋಡೆ ಕೆರೆಯಲ್ಲಿ ಜರುಗಿದೆ.
ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಈ ಕೆರೆ ಸುತ್ತಲು ಬೆಟ್ಟ-ಗುಡ್ಡಗಳು ಆವರಿಸಿವೆ. ಕೆಲವು ಮೀನುಗಾರರು ಇಲ್ಲಿ ಪ್ರತಿನಿತ್ಯ ಮೀನು ಹಿಡಿಯುತ್ತಾರೆ. ಅದೇ ಈ ರೀತಿ ಇಂದು ಸಹ ಮೀನು ಹಿಡಿಯಲು ತೆರಳಿದಂತಹ ಸಂದರ್ಭದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳ ಮೃತದೇಹ ಪತ್ತೆ ಆಗಿದೆ.
ಇನ್ನು ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆ ಇಬ್ಬರು ತಬ್ಬಿಕೊಂಡು ಇರುವ ರೀತಿಯಲ್ಲಿ ಕೆರೆಯ ಕೆಸರಿನಲ್ಲಿ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಂದು ಕಡೆ ಆತ್ಮಹತ್ಯೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ರೆ, ಮತ್ತೊಂದು ಕಡೆ ಕೊಲೆಯೋ ಎಂಬ ಅನುಮಾನ ಮೂಡಿದೆ. ಬೆಳ್ಳಂಬೆಳಗ್ಗೆ ಕೆರೆಯಲ್ಲಿ ಇಬ್ಬರು ವ್ಯಕ್ತಿಗಳ ಮೃತದೇಹ ಪತ್ತೆಯಾಗಿರುವುದು ಸಹಜವಾಗಿಯೇ ನಗರ ಪ್ರದೇಶದ ಜನರ ಆಂತಕಕ್ಕೆ ಕಾರಣವಾಗಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಪಾಂಡವಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮೃತದೇಹಗಳನ್ನ ಕೆರೆಯಿಂದ ಹೊರ ತೆಗೆದಿದ್ದಾರೆ. ಅಲ್ಲದೆ ಹೆಚ್ಚಿನ ತನಿಖೆಗಾಗಿ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ನಂತರ ಸತ್ಯಾಸತ್ಯತೆ ತಿಳಿಯಲಿದ್ದಾರೆ.