ಆಮ್ಸ್ಟರ್ಡಾಂ: ನೆದರ್ಲ್ಯಾಂಡ್ಸ್ ನ ಮಾಜಿ ಪ್ರಧಾನಿ ಡ್ರೀಸ್ ವಾನ್ ಆಗ್ಟ್ ಹಾಗೂ ಅವರ ಪತ್ನಿ ಯುಜೀನ್ ಒಟ್ಟಿಗೆ ದಯಾಮರಣದ ಮೂಲಕ ಜೀವನ ಅಂತ್ಯಗೊಳಿಸುವ ಆಯ್ಕೆ ಅನುಸರಿಸಿದ್ದಾರೆ.
93 ವರ್ಷದ ದಂಪತಿ ತಮ್ಮ ಹುಟ್ಟೂರು ನಿಜ್ಮೆಗೆನ್ನಲ್ಲಿ ಕೈ ಕೈ ಹಿಡಿದುಕೊಂಡು ‘ಸುಖಮರಣ’ ಅಪ್ಪಿದ್ದಾರೆ. 1977 ರಿಂದ 1982ರ ಅವಧಿಯಲ್ಲಿ ಡ್ರೀಸ್ ವಾನ್ ಆಗ್ಟ್ ಅವರು ನೆದರ್ಲ್ಯಾಂಡ್ಸ್ ಪ್ರಧಾನಿಯಾಗಿದ್ದರು. ಕ್ರಿಶ್ಚಿಯನ್ ಡೆಮಾಕ್ರಟಿಕ್ ಅಪೀಲ್ ಪಕ್ಷದ ಮುಂಚೂಣಿ ನಾಯಕರಾಗಿದ್ದರು. ಅವರ ರಾಜಕೀಯ ಜೀವನ ಪಯಣ ತತ್ವಾದರ್ಶ ಹಾಗೂ ಮೌಲ್ಯಗಳಿಂದ ಕೂಡಿತ್ತು ಎನ್ನಲಾಗಿದೆ. ತಮ್ಮ ರಾಜಕೀಯ ಜೀವನ ಮುಗಿದ ಬಳಿಕವೂ ಅವರು ಅವುಗಳಿಗೆ ಬದ್ಧರಾಗಿದ್ದು, 2009ರಲ್ಲಿ ಪ್ಯಾಲೆಸ್ತೀನಿಯನ್ನರ ಹಕ್ಕುಗಳ ಪರವಾಗಿ ಧ್ವನಿ ಎತ್ತುವ ದಿ ರೈಟ್ಸ್ ಫೋರಮ್ ಅನ್ನು ಸ್ಥಾಪಿಸಿದ್ದರು.
ನೆದರ್ಲ್ಯಾಂಡ್ಸ್ನಲ್ಲಿ ಜನತೆ ತಮಗೆ ಬದುಕುವ ಇಚ್ಛೆ ಇಲ್ಲದಿರುವಾಗ ದಯಾಮರಣ ವ್ಯವಸ್ಥೆಯನ್ನು ಅನುಸರಿಸುವ ಅವಕಾಶವಿದೆ. ಅದರಂತೆ ಈ ದಂಪತಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ದಿ ರೈಟ್ಸ್ ಫೋರಂ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಗಂಡ ಹೆಂಡತಿ ಇಬ್ಬರೂ ಜತೆಯಾಗಿ ಜೀವ ತ್ಯಾಗ ಮಾಡುವ ಪದ್ಧತಿ ಇಲ್ಲಿ ಸಾಮಾನ್ಯವಾಗಿದೆ. ವಯಸ್ಸಾದವರು ಈ ಮಾರ್ಗದ ಸಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಜೋಡಿ ದಯಾಮರಣ ಕ್ರಮೇಣವಾಗಿ ಹೆಚ್ಚುತ್ತಿದೆ. 2022ರಲ್ಲಿ 58 ದಯಾಮರಣ ಪ್ರಕರಣಗಳು ವರದಿಯಾಗಿವೆ.
“ಅವರ ಕುಟುಂಬದ ಒಪ್ಪಿಗೆಯೊಂದಿಗೆ, ನಮ್ಮ ಸಂಸ್ಥಾಪಕ ಹಾಗೂ ಗೌರವ ಅಧ್ಯಕ್ಷ ಡ್ರೀಸ್ ವಾನ್ ಆಗ್ಟ್ ಅವರು ಫೆ 5ರ ಸೋಮವಾರ ತಮ್ಮ ತವರು ಪಟ್ಟಣ ನಿಜ್ಮೆಗೆನ್ನಲ್ಲಿ ನಿಧನರಾದರು ಎಂದು ಪ್ರಕಟಿಸುತ್ತಿದ್ದೇವೆ. ಅವರು ತಾವು 70ಕ್ಕೂ ಹೆಚ್ಚು ವರ್ಷ ಬೆಂಬಲಕ್ಕೆ ಬೆಂಬಲವಾಗಿ ಜತೆಗಿದ್ದ ಮತ್ತು ಅವರು ‘ನನ್ನ ಹುಡುಗಿ’ ಎಂದು ಯಾವಾಗಲೂ ಹೇಳುತ್ತಿದ್ದ ತಮ್ಮ ಪ್ರೀತಿಯ ಪತ್ನಿ ಯೂಜಿನ್ ವಾನ್ ಆಗ್ಟ್- ಕ್ರೆಕೆಲ್ಬರ್ಗ್ ಅವರ ಕೈ ಹಿಡಿದು ಜತೆಯಾಗಿ ನಿಧನರಾದರು. ಅಂತ್ಯಸಂಸ್ಕಾರವು ಖಾಸಗಿಯಾಗಿ ನಡೆಯಲಿದೆ. ವಾನ್ ಆಗ್ಟ್ ಮತ್ತು ಅವರ ಪತ್ನಿ ಇಬ್ಬರಿಗೂ 93 ವರ್ಷ ವಯಸ್ಸಾಗಿತ್ತು” ಎಂದು ಹೇಳಿಕೆ ತಿಳಿಸಿದೆ.