ಬೆಂಗಳೂರು :- ಪೌರಕಾರ್ಮಿಕರಿಗೆ ರಿಲೀಫ್ ಸಿಕ್ಕಿದ್ದು, ಪಿಎಫ್ ಬಾಕಿ ಪಾವತಿಸಲು ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ಬಿಬಿಎಂಪಿ ಪೌರಕಾರ್ಮಿಕರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿ ನ್ಯಾಯಮೂರ್ತಿ ಕೆಎಸ್ ಹೇಮಲೇಖಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಉದ್ಯೋಗದಾತರ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯಿದೆ, 1952 ರ ಸೆಕ್ಷನ್ 7A ಗೆ ಅನುಗುಣವಾಗಿ ಶೇ 12 ದರದಲ್ಲಿ ಸರಳ ಬಡ್ಡಿಯೊಂದಿಗೆ ಮೊತ್ತವನ್ನು ಠೇವಣಿ ಮಾಡುವಂತೆ 2017 ರ ಅಕ್ಟೋಬರ್ 26 ರಂದು ಬೆಂಗಳೂರಿನ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಆದೇಶವನ್ನು ಹೊರಡಿಸಿದ್ದರು. ಸಂಘವು ಆದೇಶದ ಅನುಷ್ಠಾನಕ್ಕೆ ನಿರ್ದೇಶನಗಳನ್ನು ಕೋರಿ ಅರ್ಜಿ ಸಲ್ಲಿಸಿತ್ತು. ಏತನ್ಮಧ್ಯೆ, ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಆದೇಶವನ್ನು ಪ್ರಶ್ನಿಸಿ ಬಿಬಿಎಂಪಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ಇಪಿಎಫ್ ಮತ್ತು ಎಂಪಿ ಕಾಯಿದೆಯ ಸೆಕ್ಷನ್ 2(ಎಫ್) ಮತ್ತು ಎಂಪ್ಲಾಯೀಸ್ ಸ್ಟೇಟ್ ಇನ್ಶೂರೆನ್ಸ್ ಆಕ್ಟ್ 1948ರ ಸೆಕ್ಷನ್ 2(9) ಎರಡರಲ್ಲೂ ‘ನೌಕರ’ ವ್ಯಾಪ್ತಿಯೊಳಗೆ ಗುತ್ತಿಗೆ ಕಾರ್ಮಿಕರನ್ನು ಸೇರಿಸಿರುವುದನ್ನು ಗಮನಿಸಿ ಬಿಬಿಎಂಪಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ