ಬೆಂಗಳೂರು: ಅತ್ತ ಸಾಮಾಜಿಕ ಜಾಲತಾಣದಲ್ಲಿ ಬೆಳ್ಳುಳ್ಳಿ ಕಬಾಬ್ ಸಾಕಷ್ಟು ಟ್ರೆಂಡ್ ಆಗುತ್ತಿದ್ದರೆ ಇತ್ತ ಬೆಳ್ಳುಳ್ಳಿ ಬೆಲೆ ಗಗನಕ್ಕೆ ಏರಿದೆ. ಇದರಿಂದ ಬೆಳ್ಳುಳ್ಳಿಯಿಂದ ತಯಾರಿಸುವ ಪದಾರ್ಥಗಳ ಬೆಲೆಯೂ ಕೂಡ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬೆಳ್ಳುಳ್ಳಿ ಕಬಾಬ್ ತಿನ್ನಬೇಕೆಂಬ ಆಸೆ ಇಟ್ಟುಕೊಂಡವರಿಗೆ ಬೆಲೆಯ ಬಿಸಿ ತಟ್ಟಲಿದೆ. ರಾಜ್ಯಾದ್ಯಂತ ಬೆಳ್ಳುಳ್ಳಿ ಪೂರೈಕೆಯಲ್ಲಿ ಕುಸಿತ ಕಂಡಿದೆ. ಹೀಗಾಗಿ ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದೆ.
Electoral Bonds: ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದ ಸುಪ್ರೀಂ
ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಯಾರ್ಡ್ನಲ್ಲಿ ಬೆಳ್ಳುಳ್ಳಿಯ ಪೂರೈಕೆ ಶೇ.50 ರಷ್ಟು ಕುಸಿದಿದೆ. ಇದರಿಂದ ಕೆಜಿ ಬೆಳ್ಳುಳ್ಳಿಗೆ 350 ರೂ. ಚಿಲ್ಲರೆ ಮಾರುಕಟ್ಟೆಯಲ್ಲಿ 400 ರೂ.ಗೆ ತಲುಪಿದೆ.
ಬೆಂಗಳೂರು ಸಗಟು ಬೆಳ್ಳುಳ್ಳಿ ಮಾರಾಟಗಾರ ಮಾತನಾಡಿ, ಬೆಂಗಳೂರಿಗೆ ಸಾಮಾನ್ಯವಾಗಿ ದಿನಕ್ಕೆ 40 ಕೆಜಿ ತೂಕವಿರುವ 3,000 ಬೆಳ್ಳುಳ್ಳಿ ಚೀಲ ಬರುತ್ತಿದ್ದವು. ಆದರೆ ಕಳೆದ ಕೆಲವು ದಿನಗಳಿಂದ ಪೂರೈಕೆಯು ಶೇಕಡಾ 50 ರಷ್ಟು ಕಡಿಮೆಯಾಗಿದೆ. ಹೀಗಾಗಿ ದರ ಏರಿಕೆಯಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಬರಗಾಲ ಆವರಿಸಿದ್ದರಿಂದ ಪೂರೈಕೆಗೆ ತೊಂದರೆಯಾಗಿದೆ ಎಂದು ಹೇಳಿದರು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಬೆಳೆಯಲಾಗುತ್ತಿದ್ದು, ಇಡೀ ಕರ್ನಾಟಕಕ್ಕೆ ಪೂರೈಸಲು ಇದು ಸಾಕಾಗುತ್ತಿಲ್ಲ. ರಾಜ್ಯವು ಸಾಮಾನ್ಯವಾಗಿ ಮಧ್ಯಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದಂತಹ ರಾಜ್ಯಗಳಿಂದ ಬೆಳ್ಳುಳ್ಳಿಯನ್ನು ಆಮದು ಮಾಡಿಕೊಳ್ಳುತ್ತದೆ. ಆದರೆ ಈಗ, ನಾವು ಮಧ್ಯಪ್ರದೇಶದಿಂದ ಮಾತ್ರ ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ ತಿಂಗಳ ಅಂತ್ಯದ ವೇಳೆಗೆ, ಗುಜರಾತ್ ಮತ್ತು ರಾಜಸ್ಥಾನದಿಂದಲೂ ಪೂರೈಕೆ ಪುನರಾರಂಭವಾಗುತ್ತದೆ ಮತ್ತು ದರ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಒಟ್ಟಿನಲ್ಲಿ ಬೆಳ್ಳುಳ್ಳಿ ಏರಿಕೆಯಿಂದಾಗಿ ಜನರು ತತ್ತರಿಸಿದ್ದಾರೆ. ಒಂದು ವೇಳೆ ಬೆಳ್ಳುಳ್ಳಿ ಮಾರುಕಟ್ಟೆಯಲ್ಲಿ ದರ ಕಡಿಮೆಯಾದರೂ ವ್ಯಾಪಾರಿಗಳು ಹೆಚ್ಚಾದ ಬೆಲೆಯಲ್ಲೇ ಮಾರುತ್ತಿದ್ದಾರೆ ..ಇದರಿಂದ ಗ್ರಾಹಕರು ಕೆಂಗಟ್ಟಿದ್ದು ಮುಂದಿನ ದಿನಗಳಲ್ಲಿ ಬೆಳ್ಳುಳ್ಳಿ ದರ ಕಡಿಮೆಯಾಗುತ್ತಾ ಎಂದು ಕಾದು ನೋಡಬೇಕಿದೆ..