ಸದೃಢವಾದ ಮತ್ತು ಆರೋಗ್ಯಕರ ದೇಹವನ್ನು ನಾವೆಲ್ಲರೂ ಬಯಸುತ್ತೇವೆ ಮತ್ತು ಬಹಳಷ್ಟು ವಿಧಾನಗಳನ್ನು ಪ್ರಯತ್ನಿಸುತ್ತೇವೆ. ಆರೋಗ್ಯ ವೃದ್ದಿಸುವ ಎಷ್ಟೋ ವಿಧಾನಗಳು ಪ್ರಚಾರದ ಕೊರತೆಯಿಂದಾಗಿ ಅರಿವಿಗೆ ಬಾರದೇ ಹೋಗುತ್ತವೆ. ಇದರಲ್ಲಿ ಒಂದು ವಿಧಾನ ಜೀರಿಗೆ ನೆನೆಸಿಟ್ಟ ನೀರನ್ನು ಮುಂಜಾನೆ ಕುಡಿಯುವುದು ದೇಹಕ್ಕೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ. ಇದರ ಜೊತೆಗೆ ಕೊಂಚ ಬೆಲ್ಲ ಸೇರಿಸಿದರೆ ಇದರ ಕ್ಷಮತೆ ಇನ್ನಷ್ಟು ಹೆಚ್ಚುತ್ತದೆ.
ಹಿರಿಯರ ಅನುಭವದ ಪ್ರಕಾರ ಈ ವಿಧಾನ ಅತ್ಯಂತ ಆರೋಗ್ಯಕರ ಅಭ್ಯಾಸವಾಗಿದೆ. ಮುಖ್ಯವಾಗಿ ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಬೆಲ್ಲ ಮತ್ತು ಜೀರಿಗೆಯನ್ನು ಪ್ರತ್ಯೇಕವಾಗಿ ಪರಿಗಣಿಸಿದಾಗ ಇವುಗಳಲ್ಲಿರುವ ಪ್ರಯೋಜನಗಳನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ…
ಜೀರಿಗೆ ಮತ್ತು ಬೆಲ್ಲದ ನೀರು ತಯಾರಿಸುವುದು ಹೇಗೆ
ಜೀರಿಗೆ ಮತ್ತು ಬೆಲ್ಲದ ನೀರನ್ನು ತಯಾರಿಸುವುದು ಹೆಚ್ಚು ಕಷ್ಟವೇನಲ್ಲ. ಒಂದು ಲೋಟ ನೀರನ್ನು ಕುದಿಸಿ ಉರಿ ಆರಿಸಿ. (ಅಂದರೆ ಕುದಿ ಬಂದ ಮೇಲೆ ಒಲೆಯಿಂದ ಇಳಿಸಬೇಕು) ಒಂದು ಚಿಕ್ಕ ಚಮಚ ಜೀರಿಗೆ ಮತ್ತು ಸುಮಾರು ಇಷ್ಟೇ ಪ್ರಮಾಣದ ಬೆಲ್ಲವನ್ನು ಸೇರಿಸಿ ಮುಚ್ಚಳ ಮುಚ್ಚಿ ತಣಿಯಲು ಬಿಡಿ.
ಇದು ಉಗುರುಬೆಚ್ಚಗಾಗುವಷ್ಟು ತಣಿದರೆ ಸಾಕು. ಈ ನೀರನ್ನು ಬೆಳಿಗ್ಗೆದ್ದ ಬಳಿಕ ದಿನದ ಮೊದಲ ಆಹಾರವನ್ನಾಗಿ ಸೇವಿಸಬೇಕು. ಬಳಿಕ ಸುಮಾರು ಮುಕ್ಕಾಲು ಘಂಟೆಯವರೆಗೂ ಏನನ್ನೂ ಸೇವಿಸಬಾರದು. ನಂತರ ಲಘು ಉಪಾಹಾರ ಸೇವಿಸಬೇಕು.
ಜೀರಿಗೆ ಮತ್ತು ಬೆಲ್ಲದ ನೀರಿನ ಪ್ರಯೋಜನಗಳು
ಬನ್ನಿ, ಈ ಕ್ರಮವನ್ನು ಅನುಸರಿಸುವ ಮೂಲಕ ದೇಹಕ್ಕೆ ಲಭಿಸುವ ಅದ್ಭುತ ಪ್ರಯೋಜನಗಳನ್ನು ಅರಿಯೋಣ:
* ಹೊಟ್ಟೆಯುಬ್ಬರಿಕೆಯನ್ನು ಕಡಿಮೆ ಮಾಡುತ್ತದೆ
* ದೇಹದ ಅಧಿಕ ಉಷ್ಣತೆಯನ್ನು ಕಡಿಮೆ ಮಾಡುತ್ತದೆ
* ಮಹಿಳೆಯರ ಮಾಸಿಕ ಚಕ್ರವನ್ನು ನಿಯಂತ್ರಿಸುತ್ತದೆ
* ಮಲಬದ್ಧತೆ ಆಗದಂತೆ ತಡೆಯುತ್ತದೆ
* ದೇಹದ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ
ಹೊಟ್ಟೆಯುಬ್ಬರಿಕೆಯನ್ನು ಕಡಿಮೆ ಮಾಡುತ್ತದೆ
ಜೀರಿಗೆ ಮತ್ತು ಬೆಲ್ಲವನ್ನು ನೀರಿನಲ್ಲಿ ಬೆರೆಸಿ ಸೇವಿಸುವ ಮೂಲಕ ಹೊಟ್ಟೆಯಲ್ಲಿ ಉಬ್ಬರಿಕೆ, ಹುಳಿತೇಗು, ಮತ್ತು ವಾಯುಪ್ರಕೋಪದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದು ಆಮ್ಲೀಯತೆಯನ್ನು ಸಂತುಲನಗೊಳಿಸುವ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ, ತನ್ಮೂಲಕ ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೂ ಇದರಿಂದ ಎದುರಾಗುವ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ.
ದೇಹದ ಅಧಿಕ ಉಷ್ಣತೆಯನ್ನು ಕಡಿಮೆ ಮಾಡುತ್ತದೆ
ದೇಹದ ಉಷ್ಣತೆ ಸದಾ ಆರೋಗ್ಯಕರ ಮಿತಿಗಳಲ್ಲೇ ಇರಬೇಕು. ಕೆಲವೊಮ್ಮೆ ಜಠರ ಮತ್ತು ಕರುಳುಗಳಲ್ಲಿ ಹೆಚ್ಚುವ ಜೀವರಾಸಾಯನಿಕ ಕ್ರಿಯೆಯಿಂದ ದೇಹದ ತಾಪಮಾನ ಏರುತ್ತದೆ. ಸಾಮಾನ್ಯವಾಗಿ ಹೀಗೆ ಏರಿದ ತಾಪಮಾನ ಕೊಂಚಹೊತ್ತಿನಲ್ಲಿಯೇ ಇಳಿದರೂ ಕೆಲವು ವ್ಯಕ್ತಿಗಳಲ್ಲಿ ಇದು ತಕ್ಷಣ ಇಳಿಯುವುದಿಲ್ಲ.
ಬದಲಿಗೆ ಜ್ವರ, ತಲೆನೋವು ಮೊದಲಾದವು ಎದುರಾಗುತ್ತವೆ. ಈ ವ್ಯಕ್ತಿಗಳು ಊಟದ ಬಳಿಕ ಮೊಸರು ಮಜ್ಜಿಗೆಯನ್ನು ಸೇವಿಸುವುದು ಒಳ್ಳೆಯದು. ಇದರ ಜೊತೆಗೇ ಬೆಳಿಗ್ಗೆ ಜೀರಿಗೆ ಮತ್ತು ಬೆಲ್ಲ ನೆನೆಸಿಟ್ಟ ನೀರನ್ನು ಕುಡಿದರೆ ದೇಹದ ತಾಪಮಾನ
ಮಹಿಳೆಯರ ಮಾಸಿಕ ಚಕ್ರವನ್ನು ನಿಯಂತ್ರಿಸುತ್ತದೆ
ಮಹಿಳೆಯದ ದೇಹದಲ್ಲಿ ಜೀವಮಾನ ಪರ್ಯಂತ ಹಲವಾರು ರಸದೂತಗಳ ಪ್ರಭಾವ ಆಗುತ್ತಲೇ ಇರುತ್ತದೆ. ವಿಶೇಷವಾಗಿ ಮಾಸಿಕ ದಿನಗಳಲ್ಲಿ ಎದುರಾಗುವ ಮಾನಸಿಕ ತೊಳಲಾಟಕ್ಕೆ ಜೀರಿಗೆ ಮತ್ತು ಬೆಲ್ಲದ ನೀರು ಹೆಚ್ಚು ಪ್ರಯೋಜನಕಾರಿಯಾಗಿದೆ.
ಈ ದಿನಗಳಲ್ಲಿ ರಸದೂತಗಳ ಮಟ್ಟಗಳನ್ನು ಸಮತೋಲನದಲ್ಲಿರಿಸುವ ಮೂಲಕ ಮಾಸಿಕ ದಿನಗಳ ನೋವು ಮತ್ತು ಮನೋಭಾವಗಳನ್ನು ನಿಯಂತ್ರಣದಲ್ಲಿ ಇರಿಸಬಹುದು.
ಮಲಬದ್ಧತೆಯನ್ನು ತಡೆಯುತ್ತದೆ
ದಿನದ ಮೊದಲ ಆಹಾರವಾಗಿ ಜೀರಿಗೆ ಮತ್ತು ಬೆಲ್ಲದ ನೀರು ಸೇವಿಸುವುದರಿಂದ ಪಡೆಯಬಹುದಾದ ಪ್ರಯೋಜನಗಳಲ್ಲಿ ಪ್ರಮುಖವಾದ ಪ್ರಯೋಜನವೆಂದರೆ ಮಲಬದ್ದತೆಯಾಗದಂತೆ ತಡೆಯುವುದು. ಇಂದು ನಮ್ಮ ಆಹಾರದಲ್ಲಿ ನಾರಿನಂಶ ಕಡಿಮೆಯಾಗಿದೆ ಹಾಗೂ ಮಲಬದ್ದತೆ ಸಾಮಾನ್ಯವಾಗಿದೆ.
ವಿಶೇಷವಾಗಿ ಮೈದಾ ಆಧಾರಿತ ಆಹಾರ ಸೇವನೆಯಿಂದ ಇದು ಹೆಚ್ಚಾಗುತ್ತದೆ. ಜೀರಿಗೆ ಮತ್ತು ಬೆಲ್ಲದ ನೀರು ಕರುಳುಗಳಲ್ಲಿ ನಾರಿನಂಶ ಇಲ್ಲದ ಆಹಾರಗಳೂ ಸುಲಭವಾಗಿ ಮುಂದೆ ಸಾಗಲು ನೆರವಾಗುತ್ತವೆ ಹಾಗೂ ತನ್ಮೂಲಕ ದೀರ್ಘ ಕಾಲದಿಂದ ತೊಂದರೆ ಕೊಡುತ್ತಿರುವ ಮಲಬದ್ದತೆಯನ್ನೂ ಗುಣಪಡಿಸುತ್ತವೆ.
ದೇಹದ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ
ಕೆಲವು ನೋವುಗಳು ದೇಹದ ಒಳಗೇ ಅವ್ಯಕ್ತರೂಪದಲ್ಲಿದ್ದು ಆಗಾಗ ತೊಂದರೆ ಕೊಡುತ್ತಿರುತ್ತವೆ. ರಕ್ತಪರಿಚಲನೆ ಪರಿಪೂರ್ಣವಾಗಿ ದೊರಕದಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಬೆಲ್ಲ ಮತ್ತು ಜೀರಿಗೆಯ ನೀರಿನ ಸೇವನೆಯಿಂದ ದೇಹದ ರಕ್ತದ ಪರಿಚಲನೆ ಉತ್ತಮಗೊಂಡು ಹಲವಾರು ನೋವುಗಳು ನಿಧಾನವಾಗಿ ಇಲ್ಲವಾಗುತ್ತವೆ.
ಹವಾಮಾನದ ಬದಲಾವಣೆಯಿಂದಲೂ ಆಗಾಗ ಮೈ ಕೈ ನೋವು, ತಲೆನೋವು, ಮತ್ತು ಉರಿಯೂತ ಎದುರಾಗುತ್ತದೆ. ಜೀರಿಗೆ ಮತ್ತು ಬೆಲ್ಲದ ನೀರು ಅದ್ಭುತ ಉರಿಯೂತ ನಿವಾರಕ ಗುಣವನ್ನು ಹೊಂದಿರುವ ಕಾರಣ, ಜೀರಿಗೆ ಮತ್ತು ಬೆಲ್ಲದ ನೀರನ್ನು ಕುಡಿಯುವುದರಿಂದ ದೇಹದಲ್ಲಿನ ಉರಿಯೂತ ಕಡಿಮೆಯಾಗುತ್ತದೆ.
ಇತರ ಪ್ರಯೋಜನಗಳು
*ಗರ್ಭಾವಸ್ಥೆಯ ಎರಡನೆಯ ತ್ರೈಮಾಸಿಕದಿಂದ ಸೇವಿಸುತ್ತಾ ಬಂದರೆ ಹೆರಿಗೆ ಸುಲಭವಾಗುತ್ತದೆ ಮತ್ತು ಎದೆಹಾಲಿನ ಪ್ರಮಾಣ ಹೆಚ್ಚುತ್ತದೆ
* ಗರ್ಭಾವಸ್ಥೆಯಲ್ಲಿ ಜೀರ್ಣಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ.
* ಮಧುಮೇಹಿಗಳು ಈ ಅಭ್ಯಾಸವನ್ನು ರೂಢಿಸಿಕೊಂಡರೆ ರಕ್ತದಲ್ಲಿ ಸಕ್ಕರೆಯ ಮಟ್ಟಗಳನ್ನು ನಿಯಂತ್ರಿಸುವುದು ಸುಲಭವಾಗಿ ಮಧುಮೇಹದ ನಿರ್ವಹಣೆಯೂ ಸುಲಭವಾಗುತ್ತದೆ.
* ಉಸಿರಾಟದ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಸ್ವಭಾವತಃ ಕಫ-ವಿರೋಧಿ ಗುಣ ಹೊಂದಿದ್ದು, ನಿಮ್ಮ ಎದೆಯಲ್ಲಿ ಸಂಗ್ರಹವಾದ ಕಫ ಕರಗಿ ಹೊರಬರಲು ಸಹಾಯ ಮಾಡುತ್ತದೆ. ತನ್ಮೂಲಕ ಉಸಿರಾಟವನ್ನು ನಿರಾಳಗೊಳಿಸುತ್ತದೆ. (ಕಫ ಇದ್ದರೆ ಈ ನೀರನ್ನು ಕೊಂಚ ಬಿಸಿ ಮಾಡಿ ಕುಡಿಯಬೇಕು)
* ಜೀರಿಗೆ ನೀರಿನಲ್ಲಿ ಪೊಟ್ಯಾಸಿಯಮ್ ಅಂಶ ಅಧಿಕವಾಗಿದೆ. ಪೊಟ್ಯಾಸಿಯಮ್ ಒಂದು ಪ್ರಮುಖ ಖನಿಜವಾಗಿದ್ದು, ದೇಹದ ಸರಿಯಾದ ಕಾರ್ಯ ನಿರ್ವಹಣೆಗೆ ಅಗತ್ಯವಾಗಿದೆ. ಇದು ಉಪ್ಪಿನ ಋಣಾತ್ಮಕ ಪರಿಣಾಮಗಳನ್ನು ಸಮತೋಲನಗೊಳಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
* ಯಕೃತ್ತಿಗೆ ಒಳ್ಳೆಯದು: ಜೀರಿಗೆ ಜೀವಾಣು ನಿರ್ವಿಶೀಕರಣ ಗುಣಲಕ್ಷಣಗಳನ್ನು ಮತ್ತು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದೆ. ಜೀರಿಗೆ ನೀರು ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ಪಿತ್ತರಸದ ಉತ್ಪಾದನೆಗೂ ನೆರವಾಗುತ್ತದೆ. ಆದ್ದರಿಂದ, ಇದು ಯಕೃತ್ತಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ.