ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಚಳುವಳಿ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಎರಡು ದಿನಗಳಿಂದ ರೈತರ ಪ್ರತಿಭಟನೆ ಹಿನ್ನೆಲೆ ದೆಹಲಿ ಸೇರಿದಂತೆ ಪಂಜಾಬ್, ಹರ್ಯಾಣ ಸಾಕಷ್ಟು ಕಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇಂದು ರೈತರು ಪಂಜಾಬ್ನಲ್ಲಿ ರೈಲುಗಳನ್ನು ತಡೆದು ಪ್ರತಿಭಟನೆ ನಡೆಸಲಿದ್ದಾರೆ.
ಮಂಗಳವಾರ ರೈತರ ಚಳವಳಿಯಿಂದಾಗಿ ಪೊಲೀಸರು ಹಾಗೂ ರೈತರ ನಡುವೆ ಘರ್ಷಣೆ ಏರ್ಪಟ್ಟಿತ್ತು. ರೈತರನ್ನು ದೆಹಲಿಗೆ ಪ್ರವೇಶಿಸದಂತೆ ತಡೆಯಲು ಪೊಲೀಸರು ಡ್ರೋನ್ ಮೂಲಕ ಅಶ್ರುವಾಯು ಶೆಲ್ಗಳನ್ನು ಸಿಡಿಸಿದ್ದರು. ರೈತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು, ಇಂದು ಪಂಜಾಬ್ ರೈತ ಸಂಘಟನೆಗಳು ರೈಲು ತಡೆಯಲು ನಿರ್ಧರಿಸಿವೆ.
ರೈತರು ದೆಹಲಿಗೆ ಬರುವುದನ್ನು ತಡೆಯಲು ಗಡಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಟಿಕ್ರಿ, ಸಿಂಗು ಮತ್ತು ಝರೋಡಾ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ರೈತರು ಟ್ರ್ಯಾಕ್ಟರ್ ಮತ್ತು ಟ್ರಾಲಿಗಳೊಂದಿಗೆ ರಾಜಧಾನಿ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.
ಉತ್ತರ ಪ್ರದೇಶ ಜೊತೆಗಿನ ಚಿಲ್ಲಾ-ಗಾಜಿಪುರ ಗಡಿಯನ್ನೂ ಮುಚ್ಚಲಾಗಿದೆ. ದೆಹಲಿ ಪೊಲೀಸರು ಪ್ರವೇಶ, ನಿರ್ಗಮನ ಸ್ಥಳಗಳಲ್ಲಿ ಬ್ಯಾರಿಕೇಡ್ಗಳು, ಕಬ್ಬಿಣದ ಮೊಳೆಗಳು ಹಾಗೂ ಕಾಂಕ್ರೀಟ್ ಬ್ಯಾರಿಕೇಡ್ಗಳನ್ನು ಅಳವಡಿಸಿದೆ.