ರಾಜ್ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಶುರುವಾಗಿದೆ. ಟಾಸ್ ಗೆದ್ದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಇನ್ನು ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಪರ ಸರ್ಫರಾಝ್ ಖಾನ್ ಹಾಗೂ ಧ್ರುವ್ ಜುರೇಲ್ ಪಾದಾರ್ಪಣೆ ಮಾಡಿದ್ದಾರೆ.
ಮೂರನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿರುವ ಕೆಎಲ್ ರಾಹುಲ್ ಸ್ಥಾನದಲ್ಲಿ ಸರ್ಫರಾಝ್ ಸ್ಥಾನ ಪಡೆದರೆ, ಕೆಎಸ್ ಭರತ್ ಸ್ಥಾನದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಧ್ರುವ್ ಜುರೇಲ್ ಕಣಕ್ಕಿಳಿದಿದ್ದಾರೆ. ಹಾಗೆಯೇ ಅಕ್ಷರ್ ಪಟೇಲ್ ತಂಡದಿಂದ ಹೊರಗುಳಿದಿದ್ದಾರೆ.
ಐದು ಪಂದ್ಯಗಳ ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 28 ರನ್ಗಳಿಂದ ಜಯ ಸಾಧಿಸಿತ್ತು. ಇನ್ನು ವಿಶಾಖಪಟ್ಟಣಂನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ ಕಂಬ್ಯಾಕ್ ಮಾಡಿದ ಟೀಮ್ ಇಂಡಿಯಾ 106 ರನ್ಗಳ ಅಮೋಘ ಗೆಲುವು ದಾಖಲಿಸಿತು. ಇದರೊಂದಿಗೆ ಸರಣಿಯು 1-1 ಅಂತರದಿಂದ ಸಮಗೊಂಡಿದೆ. ಇದೀಗ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ. ಹೀಗಾಗಿ ರಾಜ್ಕೋಟ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲೂ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.