ಚಿತ್ರದುರ್ಗ:- ಜನರ ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಂಡ ವಂಚಕರು ಹಣವನ್ನು ಡಬಲ್ ಮಾಡಿಕೊಡುತ್ತೇವೆ ಎಂದು ಆಸೆ ಹುಟ್ಟಿಸಿ ಬಳಿಕ ಅವರ ಹಣ ಪಡೆದು ವಂಚನೆ ಮಾಡುತ್ತಿರುವ ಜಾಲ ದೊಡ್ಡದಿದೆ. ಚಿತ್ರದುರ್ಗದಲ್ಲಿಯೂ ಅದೇ ರೀತಿ ಹಣ ಡಬಲ್ ಮಾಡಿಕೊಡುತ್ತೇನೆ ಎಂದವನ ನಂಬಿದ ಜನರಿಗೆ ಪಂಗನಾಮ ಸಿಕ್ಕಿದೆ.
ಆಂಧ್ರ ಮೂಲದ ಕೋಡೆ ರಮಣಯ್ಯ ಎಂಬ ವ್ಯಕ್ತಿ ಕ್ರೌಡ್ ಕ್ಲಬ್ ಇಂಟರ್ನ್ಯಾಷನಲ್ ಕಂಪನಿ ಹೆಸರಲ್ಲಿ 60 ದಿನದಲ್ಲಿ ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿ ವಂಚನೆ ಮಾಡಿದ್ದಾನೆ. ಈ ಘಟನೆ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ.15ರಂದು ದಾಖಲಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರಿನ ರೈಲ್ವೆ ನೌಕರ ರಮೇಶಪ್ಪ ಎಂಬುವವರು ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳು ರಮೇಶಪ್ಪ, ಸಂಬಂಧಿಕರು ಸೇರಿ 106 ಜನರಿಗೆ ವಂಚನೆ ಮಾಡಿರುವುದು ಪತ್ತೆಯಾಗಿದೆ.
ಆರೋಪಿಗಳು ರಮೇಶಪ್ಪ ಅವರ ಬಳಿ 1 ಲಕ್ಷ 4 ಸಾವಿರ ಹಣ ಪಡೆದು ವಂಚನೆ ಮಾಡಿದ್ದಾರೆ. ಇನ್ನು ಇವರು 106 ಜನರಿಂದ ಒಟ್ಟು 4.79 ಕೋಟಿ ವಂಚಿಸಿದ್ದಾರೆ. ಚಿಕ್ಕಜಾಜೂರು ಠಾಣೆಯಿಂದ ಚಿತ್ರದುರ್ಗದ CEN ಠಾಣೆಗೆ ಕೇಸ್ ವರ್ಗಾವಣೆಯಾಗಿದ್ದು ಚಿತ್ರದುರ್ಗ CEN ಠಾಣೆ ಸಿಪಿಐ ವೆಂಕಟೇಶ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.