ಆಡಳಿತ ವಿರೋಧಿ ದಂಗೆಯನ್ನು ಹತ್ತಿಕ್ಕುವ ಸಲುವಾಗಿ ಯುವ ಜನರನ್ನು ಏಪ್ರಿಲ್ನಿಂದ ಕಡ್ಡಾಯವಾಗಿ ಸೇನೆಗೆ ನೇಮಿಸಿಕೊಳ್ಳುವ ಯೋಜನೆಗೆ ಮ್ಯಾನ್ಮಾರ್ ಸೇನಾಡಳಿಗೆ ಮುಂದಾಗಿದೆ. ಇದಕ್ಕಾಗಿ ನಿವೃತ್ತ ಸೇನಾ ಸಿಬ್ಬಂದಿಯ ಆಗತ್ಯ ಇದೆ ಎಂದು ಮೂಲಗಳು ತಿಳಿಸಿವೆ.
2021ರಲ್ಲಿ ಚುನಾಯಿತ ಸರ್ಕಾರದಿಂದ ಸೇನೆಯು ಅಧಿಕಾರ ಕಸಿದುಕೊಂಡ ಬಳಿಕ ದೇಶದಲ್ಲಿ ಪ್ರಕ್ಷುಬ್ಧ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಜನರನ್ನು ಸೇವೆಗೆ ಕರೆಸಿಕೊಳ್ಳಲು ಯೋಜಿಸಿರುವುದು ಸೇನಾಡಳಿತ ಒತ್ತಡದಲ್ಲಿದೆ ಎಂಬುದನ್ನು ಸೂಚಿಸುತ್ತದೆ.
18ರಿಂದ 35 ವಯಸ್ಸಿನ ಪುರುಷರು ಮತ್ತು 18ರಿಂದ 27 ವಯಸ್ಸಿನ ಮಹಿಳೆಯರು ಎರಡು ವರ್ಷದವರೆಗೆ ಸೇನೆಯಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಕಾನೂನನ್ನು ಮ್ಯಾನ್ಮಾರ್ ಆಡಳಿತ ಕಳೆದವಾರ ಘೋಷಿಸಿದೆ. ಇದು ಏಪ್ರಿಲ್ನಿಂದ ಜಾರಿಗೆ ಬರಲಿದೆ.
‘ಕಡ್ಡಾಯ ಸೇನಾ ಭರ್ತಿಯನ್ನು ಏಪ್ರಿಲ್ನಿಂದ ಆರಂಭಿಸಲು ಕಾರ್ಯಪ್ರವೃತ್ತರಾಗಿದ್ದೇವೆ’ ಎಂದು ಸೇನಾಡಳಿತದ ವಕ್ತಾರ ಜಾ ಮಿನ್ ತುನ್ ತಿಳಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ. ಈ ಬಗ್ಗೆ ಅವರು ಹೆಚ್ಚಿನ ವಿವರ ನೀಡಿಲ್ಲ. ಆದರೆ, ಕಳೆದ ಐದು ವರ್ಷಗಳಲ್ಲಿ ನಿವೃತ್ತರಾಗಿರುವವರೂ ಸೇವೆಗೆ ವಾಪಸ್ ಆಗುವಂತೆ ತುನ್ ತಿಳಿಸಿರುವುದಾಗಿ ಸರ್ಕಾರಿ ಮಾಧ್ಯಮ ‘ಎಂಆರ್ಟಿವಿ’ ಸುದ್ದಿ ಮಾಡಿದೆ.
ಸೇನಾಡಳಿತವು ತನ್ನ ಸೇನಾ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ, ದಕ್ಷಿಣ ಏಷ್ಯಾದ ವಿಶ್ಲೇಷಕರು ಮತ್ತು ರಾಜತಾಂತ್ರಿಕರು, ಮ್ಯಾನ್ಮಾರ್ ಆಡಳಿತವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಹಾಗಾಗಿ ಸೇನಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಿದೆ ಎಂದು ಅಂದಾಜಿಸಿದ್ದಾರೆ.