ಒಟ್ಟಾವ: ಕೆನಡಾದ ಒಂಟಾರಿಯೊ ಪ್ರಾಂತದಲ್ಲಿ ಭಾರತೀಯ ಮೂಲದ ವ್ಯಕ್ತಿಯೋರ್ವನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಭಾರತೀಯ ಮೂಲದ ಕುಲ್ದೀಪ್ ಸಿಂಗ್ ಎಂಬವರನ್ನು ಹತ್ಯೆ ಮಾಡಲಾಗಿದೆ. ಆತನ ಪುತ್ರನೇ ಈ ಕೃತ್ಯ ಎಸಗಿರುವ ಶಂಕೆಯಿದೆ ಎಂದು ಪೊಲೀಸರು ಮಾಹಿತಿ ನಿಡಿದ್ದಾರೆ.
ಹ್ಯಾಮಿಲ್ಟನ್ ನಗರದ ಮನೆಯೊಂದರಲ್ಲಿ ಗುಂಡಿನ ಸದ್ದು ಕೇಳಿಬಂದಿರುವುದಾಗಿ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.ಈ ವೇಳೆ ಮನೆಯ ಮಾಲಕ 56 ವರ್ಷದ ಕುಲ್ದೀಪ್ ಸಿಂಗ್ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕುಲ್ದೀಪ್ ಹಾಗೂ ಅವರ ಪುತ್ರ 26 ವರ್ಷದ ಸುಖಾಜ್ ಸಿಂಗ್ ಚೀಮಾ ನಡುವೆ ಜಗಳವಾಗಿದ್ದು ಚೀಮಾ ತನ್ನ ತಂದೆಯ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವುದಾಗಿ ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದೆ. ಚೀಮಾನ ಭಾವಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅಧಿಕಾರಿಗಳು ಆತನ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಸ್ಥಳೀಯರಿಗೆ ಸೂಚಿಸಿದ್ದಾರೆ.