ಸಾಮಾನ್ಯವಾಗಿ ಮೊಬೈಲ್, ಕಂಪ್ಯೂಟರ್ ಅಥವಾ ಯಾವುದಾದರೂ ಎಲೆಕ್ಟ್ರಿಕ್ ಉಪಕರಣಗಳಿಗೆ ಚಿಪ್ ಅಳವಡಿಸೋದನ್ನ ಕೇಳಿದ್ದೀರಿ. ಆದರೆ ಮನುಷ್ಯನ ಮಿದುಳಿಗೆ ಚಿಪ್ ಅಳವಡಿಸುವ ಬಗ್ಗೆ ಕೇಳಿದ್ದೀರಾ? ಹೌದು, ಅಂತಹ ಸಾಹಸಕ್ಕೆ ಕೈಹಾಕಿ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ (Elon Musk) ಯಶಸ್ವಿಯಾಗಿದ್ದಾರೆ. ಮಾನವನ ಮಿದುಳಿಗೆ ಚಿಪ್ಪಾ? ಯಾರು ಇದನ್ನ ತಯಾರಿಸಿದ್ದು? ಏಕೆ ಅಳವಡಿಸುತ್ತಾರೆ? ಹೇಗೆ? ಇದರಿಂದ ಏನು ಪ್ರಯೋಜನ ಎಂಬ ಪ್ರಶ್ನೆಗಳು ಮೂಡುವುದು ಸಹಜ. ನಿಜಕ್ಕೂ ಇದೊಂದು ಕುತೂಹಲಕಾರಿ ವಿಷಯ. ಮಿದುಳಿಗೆ ಅಳವಡಿಸುವ ಚಿಪ್ ಬಗ್ಗೆ ತಿಳಿಯುವ ಮೊದಲು ಮಿದುಳಿನ ಬಗ್ಗೆ ತಿಳಿದುಕೊಳ್ಳೋಣ.
ಏನಿದು ಮಿದುಳು?
ಮಿದುಳು ಮನುಷ್ಯನ ಬದುಕಿನಲ್ಲಿ ಬಲು ಮುಖ್ಯ ಅಂಗ. ಇದನ್ನ ದೇಹದ ಕಂಟ್ರೋಲ್ ಯೂನಿಟ್ ಎಂದರೆ ತಪ್ಪಾಗಲಾರದು. ದೇಹದಲ್ಲಿರುವ ಪ್ರತಿಯೊಂದು ಅಂಗದ ಚಟುವಟಿಕೆಯನ್ನೂ ಇದು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲ, ಹೊರ ಜಗತ್ತಿನ ಆಗುಹೋಗುಗಳನ್ನು ಅರ್ಥೈಸುವ ಅಂಗವೂ ಹೌದು. ನಮ್ಮ ಪಂಚೇಂದ್ರಿಯಗಳು ಗ್ರಹಿಸಿ ಕಳುಹಿಸುವ ಸಂದೇಶಗಳನ್ನು ಪಡೆದು ಏನಾಗುತ್ತಿದೆ ಎಂಬುದು ನಮಗೆ ಅರಿವಿಗೆ ಬರುವಂತೆ ಮಾಡುತ್ತದೆ.
ಮಿದುಳಿನ ಆ ಮೂರು ಭಾಗಗಳ್ಯಾವುವು?
ಮಿದುಳು ಮೂರು ಭಾಗಗಳನ್ನು ಹೊಂದಿದೆ. ಸೆರೆಬ್ರಮ್, ಸೆರೆಬೆಲ್ಲಮ್, ಬ್ರೇನ್ಸ್ಟೀಮ್. ಸೆರೆಬ್ರಮ್ ಮಿದುಳಿನ ದೊಡ್ಡ ಭಾಗ. ಇದು ಮಿದುಳಿನ ಚಿಂತನೆಯ ಅಂಶವಾಗಿದೆ. ಸ್ನಾಯುಗಳನ್ನು ಸ್ವಯಂಪ್ರೇರಿತವಾಗಿ ನಿಯಂತ್ರಿಸುತ್ತದೆ. ಸೆರೆಬೆಲ್ಲಮ್, ಮಿದುಳಿನ ಹಿಂಭಾಗದಲ್ಲಿ ಇರುತ್ತದೆ. ಮಿದುಳಿನ ಅತ್ಯಂತ ನಿರ್ಣಾಯ ಭಾಗವಿದು. ದೇಹದ ಸಮತೋಲನ, ಚಲನೆ, ಸಮನ್ವಯವನ್ನು ನಿರ್ವಹಿಸುತ್ತದೆ. ಮಿದುಳಿನ ಕಾಂಡವು ಮಿದುಳಿನ ಉಳಿದ ಭಾಗವನ್ನು ಬೆನ್ನುಹುರಿಗೆ ಲಿಂಕ್ ಮಾಡುತ್ತದೆ. ಉಸಿರಾಟ, ಆಹಾರ ಜೀರ್ಣಕ್ರಿಯೆ, ರಕ್ತ ಪರಿಚಲನೆಯ ಉಸ್ತುವಾರಿ ಇದರದ್ದೇ.
ಮಿದುಳು ಎಷ್ಟು ಮುಖ್ಯ?
ನಾವು ಮೊದಲೇ ಚರ್ಚಿಸಿದಂತೆ, ಮನುಷ್ಯ ಚಲನಶೀಲ ಹಾಗೂ ಕ್ರಿಯಾಶೀಲನಾಗಿರಬೇಕು ಎಂದರೆ ಮಿದುಳು ತುಂಬಾ ಅವಶ್ಯ. ಒಂದು ವೇಳೆ ಮಿದುಳಿನ ಜೀವಕೋಶಗಳಿಗೆ ಹಾನಿಯಾದರೆ, ದೈಹಿಕ ತೊಂದರೆಗಳು ಉದ್ಭವಿಸುತ್ತವೆ. ನೀವು ದೇಹದ ಯಾವುದೇ ಅಂಗದ ಸಮಸ್ಯೆ ತೆಗೆದುಕೊಳ್ಳಬಹುದು. ಅದಕ್ಕೂ ಮಿದುಳಿನ ಜೀವಕೋಶಗಳಿಗೂ ಸಂಬಂಧ ಇರುತ್ತೆ. ಉದಾಹರಣೆಗೆ ಪಾರ್ಶ್ವವಾಯು ಸಮಸ್ಯೆಯನ್ನೇ ತೆಗೆದುಕೊಳ್ಳಿ. ಮಿದುಳಿನ ಜೀವಕೋಶಗಳಿಗೆ ಹಾನಿಯಾದಾಗ ಉದ್ಭವಿಸುವ ದೈಹಿಕ ತೊಂದರೆ ಪಾರ್ಶ್ವವಾಯು. ಅಂಗಾಂಗಗಳ ಸ್ವಾಧೀನ ತಪ್ಪುವುದು, ಸಮತೋಲನ, ಮಾತು ಮತ್ತು ದೃಷ್ಟಿ ಸಾಮರ್ಥ್ಯ ಮಂಕಾಗುವುದು (ಅಥವಾ ಪೂರ್ತಿ ಇಲ್ಲದಂತಾಗುವುದು).. ಇದೇ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದಕ್ಕೇ ಮನುಷ್ಯನಿಗೆ ಮಿದುಳು ತುಂಬಾ ಮುಖ್ಯ.
ಮಾನವನ ಮಿದುಳಿಗೆ ಚಿಪ್?
ಮಾನವನ ಮಿದುಳಿಗೆ ಮೈಕ್ರೋಚಿಪ್ನ್ನು ಅಳವಡಿಸಲಾಗಿದೆ ಎಂದು ಎಲೋನ್ ಮಸ್ಕ್ ಈಚೆಗೆ ಘೋಷಿಸಿದ್ದಾರೆ. ಮಾನವನ ಮಿದುಳಿನಿಂದ ನೇರವಾಗಿ ಕಂಪ್ಯೂಟರ್ ಹಾಗೂ ಮೊಬೈಲ್ಗೆ ಸಂವಹನ ಮಾಡಲು ಈ ಮೈಕ್ರೋಚಿಪ್ನ್ನು ಅಳವಡಿಸಲಾಗಿದೆ. ಮಸ್ಕ್ ಒಡೆತನದ ನ್ಯೂರಾಲಿಂಕ್ ಅಭಿವೃದ್ಧಿಪಡಿಸಿರುವ ಚಿಪ್ ಇದು. ನ್ಯೂರಾಲಿಂಕ್ನ ಮೊದಲ ಉತ್ಪನ್ನವನ್ನು ಟೆಲಿಪತಿ ಎಂದು ಕರೆಯಲಾಗಿದೆ.
ಏನಿದು ನ್ಯೂರಾಲಿಂಕ್?
ನ್ಯೂರಾಲಿಂಕ್ (Neuralink Brain Implant) ಒಂದು ನರತಂತ್ರಜ್ಞಾನ ಕಂಪನಿಯಾಗಿದೆ. ಮಿದುಳುನಿಂದ ಕಂಪ್ಯೂಟರ್ ನಡುವೆ ನೇರ ಸಂವಹನ ಏರ್ಪಡಿಸಲು 2016 ರಲ್ಲಿ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳ ತಂಡದೊಂದಿಗೆ ಮಸ್ಕ್ ಈ ಕಂಪನಿ ಸ್ಥಾಪಿಸಿದ್ದಾರೆ. ಮಾನವ ಸಾಮರ್ಥ್ಯಗಳನ್ನು ಸೂಪರ್ಚಾರ್ಜ್ ಮಾಡುವುದು, ಎಎಲ್ಎಸ್ (ನರ ಸಂಬಂಧಿತ ಮಾರಣಾಂತಿಕ ಕಾಯಿಲೆ) ಅಥವಾ ಪಾರ್ಕಿನ್ಸನ್ನಂತಹ ನರವೈಜ್ಞಾನಿಕ ಕಾಯಿಲೆ ಇರುವವರಿಗೆ ಸಹಕಾರಿಯಾಗುವುದು, ಅಂತಿಮವಾಗಿ ಮಾನವರು ಮತ್ತು ಕೃತಕ ಬುದ್ಧಿಮತ್ತೆಯ ನಡುವೆ ಸಂವಹನ ಸಾಧಿಸುವುದು ಇದರ ಗುರಿಯಾಗಿದೆ.
ಈ ತಂತ್ರಜ್ಞಾನವು ನರ ಸಂಕೇತಗಳನ್ನು ರೆಕಾರ್ಡ್ ಮಾಡಲು ಮತ್ತು ಡಿಕೋಡ್ ಮಾಡಲು ಸಮರ್ಥವಾಗಿದೆ. ನಂತರ ವಿದ್ಯುತ್ ಪ್ರಚೋದಕ ಬಳಸಿಕೊಂಡು ಮಿದುಳಿಗೆ ಮಾಹಿತಿಯನ್ನು ರವಾನಿಸುತ್ತದೆ. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಯು ಕೈಗಳನ್ನು ಬಳಸದೆಯೇ ತನ್ನ ಮನಸ್ಸನ್ನು ಮಾತ್ರ ಬಳಸಿಕೊಂಡು ಕೀಬೋರ್ಡ್ ಮತ್ತು ಮೌಸ್ ಅನ್ನು ಕುಶಲತೆಯಿಂದ ನಿರ್ವಹಿಸಲು ಅನುಮತಿಸುವ ಅಪ್ಲಿಕೇಶನ್ ಅನ್ನು ಸಹ ಅಭಿವೃದ್ಧಿಪಡಿಸುತ್ತಿದೆ.
ನ್ಯೂರಾಲಿಂಕ್ ಮೈಕ್ರೋಚಿಪ್ ಹೇಗೆ ಕೆಲಸ ಮಾಡುತ್ತೆ?
ನ್ಯೂರಾಲಿಂಕ್ ಅಭಿವೃದ್ಧಿಪಡಿಸಿರುವ ಮೈಕ್ರೋಚಿಪ್ ಅನ್ನು ಮಾನವನ ಮೇಲೆ ಪ್ರಯೋಗ ಮಾಡಲು ಅಮೆರಿಕ ಆಹಾರ ಹಾಗೂ ಔಷಧಿ ಆಡಳಿತ (ಎಫ್ಡಿಎ) ಅನುಮತಿ ನೀಡಿತ್ತು. ಈ ತಂತ್ರಜ್ಞಾನವು ಮುಖ್ಯವಾಗಿ “ಲಿಂಕ್” ಎಂಬ ಇಂಪ್ಲಾಂಟ್ ಮೂಲಕ ಕಾರ್ಯನಿರ್ವಹಿಸುತ್ತದೆ. ಶಸ್ತ್ರಚಿಕಿತ್ಸೆಯ ಮೂಲಕ ಮಾನವ ಮಿದುಳಿನೊಳಗೆ ಇರಿಸಲಾದ ಐದು ನಾಣ್ಯಗಳ ಗಾತ್ರದ ಸಾಧನ ಇದಾಗಿದೆ. ಮಾನವನ ಮಿದುಳು ನೇರವಾಗಿ ಕಂಪ್ಯೂಟರ್ನೊಂದಿಗೆ ಸಂವಹನ ನಡೆಸಲು ಈ ಸಾಧನವನ್ನು ವಿನ್ಯಾಸಗೊಳಿಸಲಾಗಿದೆ.
ಅಂಧರು, ಪಾರ್ಶ್ವವಾಯು ಪೀಡಿತರಿಗೆ ಸಹಕಾರಿ?
ಈ ತಂತ್ರಜ್ಞಾನವು ಎಲೆಕ್ಟ್ರೋಫಿಸಿಯಾಲಜಿಯಂತೆಯೇ ಕಾರ್ಯನಿರ್ವಹಿಸುತ್ತದೆ. ನರಮಂಡಲದ ವಿದ್ಯುತ್ ರಾಸಾಯನಿಕ ಸಂಕೇತಗಳು ಸಿನಾಪ್ಸೆಸ್ ಎಂದು ಕರೆಯಲ್ಪಡುವ ನರಕೋಶಗಳ ನಡುವೆ ಪರಸ್ಪರ ಸಂವಹನ ನಡೆಸುತ್ತವೆ. ಅಂಧರು ಅಥವಾ ಪಾರ್ಶ್ವವಾಯು ಪೀಡಿತರು ಯೋಚಿಸುವಂತೆ ಕಂಪ್ಯೂಟರ್ ಹಾಗೂ ಮೊಬೈಲ್ ಬಳಕೆ ಮಾಡಲು ಇದರಿಂದ ಸಾಧ್ಯವಾಗುತ್ತದೆ.