ತೊಂಡೆಕಾಯಿಯಲ್ಲಿರುವ ಅತ್ಯದ್ಭುತ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಂಡರೆ ತೊಂಡೆಕಾಯಿ ವಿರುದ್ಧ ಮುಖ ತಿರುಗಿಸಿಕೊಂಡು ಹೋಗಿದ್ದವರು ಸಹ ವಾಪಸ್ ಬಂದು ಕಾಸು ಕೊಟ್ಟು ಖರೀದಿ ಮಾಡುತ್ತಾರೆ. ಹೌದು, ತೊಂಡೆಕಾಯಿಯಲ್ಲಿ ನಮ್ಮ ದೇಹಕ್ಕೆ ಬೇಕಾದ ಅಗಾಧವಾದ ಪೌಷ್ಟಿಕ ಸತ್ವಗಳು ಸೇರಿವೆ. ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳು ಕೂಡ ಉಂಟಾಗುತ್ತವೆ.
ತೊಂಡೆಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು
ಸಾಧಾರಣವಾಗಿ ಬಳ್ಳಿಯ ರೀತಿ ಹಬ್ಬುವ ತೊಂಡೆಕಾಯಿ ಗಿಡ ನಮ್ಮ ಭಾರತ, ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಹಾಗಾಗಿ ಇಲ್ಲಿನ ಜನರು ಬಹಳ ಹಿಂದಿನ ಕಾಲದಿಂದ ತಮ್ಮ ತಮ್ಮ ಔಷಧೀಯ ಪದ್ಧತಿಗಳಲ್ಲಿ ತೊಂಡೆಕಾಯಿಯ ಬಳ್ಳಿ, ಎಲೆ, ಬೇರು ಮತ್ತು ಕಾಯಿಗಳನ್ನು ಗಿಡಮೂಲಿಕೆಯ ರೀತಿ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸುತ್ತಾ ಬಂದಿದ್ದಾರೆ.
ತೊಂಡೆಕಾಯಿಯ ಎಲೆಗಳು ಹೃದಯದ ಆಕಾರದಲ್ಲಿ ಮಧ್ಯಮ ಗಾತ್ರದಲ್ಲಿದ್ದು, ತೊಂಡೆಕಾಯಿಗಳು ಸುಮಾರು 4 ಇಂಚುಗಳಿಗಿಂತ ಕಡಿಮೆ ಬೆಳೆಯುತ್ತವೆ. ಆದರೆ ಇವುಗಳ ಅಪಾರವಾದ ನೈಸರ್ಗಿಕ ಲಾಭಗಳಿಂದ ಜನರು ಮಾರುಹೋಗಿದ್ದಾರೆ.
ತೊಂಡೆಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಏನು ಲಾಭ?
ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ
ತುಂಬಾ ದಿನಗಳಿಂದ ಅಜೀರ್ಣತೆ ಅಥವಾ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತೊಂಡೆಕಾಯಿ ಬಹಳ ಅಚ್ಚುಕಟ್ಟಾಗಿ ಪರಿಹಾರ ಒದಗಿಸುತ್ತದೆ.
ಇದರಲ್ಲಿರುವ ಹೆಚ್ಚಾದ ನೀರಿನ ಅಂಶ ಮತ್ತು ನಾರಿನ ಅಂಶದ ಕಾರಣದಿಂದ ಮನುಷ್ಯನ ಜೀರ್ಣ ಕ್ರಿಯೆಗೆ ಸಂಬಂಧ ಪಟ್ಟ ಸಾಕಷ್ಟು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತದೆ. ಬೇರೆ ಯಾವುದೇ ತರಕಾರಿಗಳಿಗೆ ಹೋಲಿಸಿದರೆ ತೊಂಡೆಕಾಯಿ ತುಂಬಾ ಆರೋಗ್ಯಕರ ಎಂದು ಬಣ್ಣಿಸಲಾಗಿದೆ.
ಮಧುಮೇಹಕ್ಕೆ ಸುಲಭ ಪರಿಹಾರ
ತೊಂಡೆಕಾಯಿ ತಿನ್ನುವ ಮುಖ್ಯ ಉದ್ದೇಶವೇ ಮಧುಮೇಹದ ನಿವಾರಣೆ ಎಂದು ಹೇಳಬಹುದು. ಏಕೆಂದರೆ ಬಹಳ ಹಿಂದಿನ ದಿನಗಳಿಂದ ನಮ್ಮ ಹಿರಿಯರು ಯಾರಿಗಾದರೂ ದೇಹದಲ್ಲಿ ಏರುಪೇರಾಗುವ ಸಕ್ಕರೆ ಅಂಶದ ಪ್ರಮಾಣವನ್ನು ಸಹಜ ಸ್ಥಿತಿಯ ಮರಳಿಸಲು ತೊಂಡೆಕಾಯಿಯ ಖಾದ್ಯಗಳನ್ನು ಸೇವಿಸಲು ಸೂಚಿಸುತ್ತಿದ್ದರು.
ಇದರ ತರುವಾಯ 2009 ರಲ್ಲಿ ನಡೆದ ಒಂದು ವೈದ್ಯಕೀಯ ಸಂಶೋಧನೆಯಲ್ಲಿ ಕೂಡ ತೊಂಡೆಕಾಯಿಯಲ್ಲಿ ಮನುಷ್ಯನ ದೇಹದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ತಗ್ಗಿಸುವಂತಹ ಗುಣ ಲಕ್ಷಣ ಇದೆ ಎಂದು ಸಾಬೀತಾಯಿತು.
ವಿಶೇಷವಾಗಿ ಕೆಂಪಾಗಿರುವ ತೊಂಡೆ ಹಣ್ಣುಗಳಲ್ಲಿ ‘ ಗ್ಲೂಕೋಸ್ – 6 – ಫೋಸ್ಫಟಸ್ ‘ ಅಂಶಗಳನ್ನು ಗಣನೀಯವಾಗಿ ಕಡಿಮೆ ಮಾಡುವಂತಹ ಅದ್ಭುತ ಶಕ್ತಿ ಇದೆ. ಆಯುರ್ವೇದ ಪದ್ಧತಿಯಲ್ಲಿ ಸಹ ತೊಂಡೆ ಹಣ್ಣುಗಳಿಗೆ ಮತ್ತು ತೊಂಡೆ ಕಾಯಿ ಬಳ್ಳಿಯ ಎಲೆಗಳಿಗೆ ಸಾಕಷ್ಟು ಮಹತ್ವವಿದೆ.
ಮಧುಮೇಹ ಈಗಾಗಲೇ ನಿಯಂತ್ರಣ ತಪ್ಪಿ ಹೋಗಿರುವವರಿಗೆ ತೊಂಡೆಕಾಯಿ ಎಲೆಗಳ ಜ್ಯೂಸ್ ತಯಾರು ಮಾಡಿ ಪ್ರತಿ ದಿನ ಕುಡಿಯಲು ಹೇಳುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ವಿವಿಧ ಬಗೆಯ ಅಲರ್ಜಿಗಳಿಂದ ರಕ್ಷಣೆ
ಇಲ್ಲಿ ಒಂದು ಮಾತನ್ನು ನಿಮಗೆ ಹೇಳಲೇಬೇಕು. ಏನೆಂದರೆ ನಮ್ಮ ಭಾರತ ಮತ್ತು ಬಾಂಗ್ಲಾದೇಶದ ಸಾಂಪ್ರದಾಯಿಕ ಔಷಧೀಯ ಪದ್ಧತಿಯಲ್ಲಿ ಅಸ್ತಮಾ ಮತ್ತು ಬ್ರಾಂಕೈಟಿಸ್ ಎಂಬ ಉಸಿರಾಟಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿಂದ ಮುಕ್ತಿ ಪಡೆಯಲು ತೊಂಡೆ ಹಣ್ಣುಗಳನ್ನು ಚಿಕಿತ್ಸೆಯ ರೂಪದಲ್ಲಿ ಬಳಕೆ ಮಾಡುತ್ತಾರೆ ಮತ್ತು ಅದರಿಂದ ಯಶಸ್ವಿ ಕೂಡ ಆಗಿದ್ದಾರೆ.
ಹೀಗೆಂದು 2011 ರಲ್ಲಿ ಚೀನಾದ ಜರ್ನಲ್ ಆಫ್ ನ್ಯಾಚುರಲ್ ಮೆಡಿಸಿನ್ ಎಂಬ ಅಧ್ಯಯನದಲ್ಲಿ ಪ್ರಕಟ ಮಾಡಲಾಗಿದೆ. ಸಂಶೋಧಕರಿಗೆ ತೊಂಡೆಕಾಯಿ ಗಳಲ್ಲಿ ಸಪೋನಿನ್, ಸ್ಟಿರಾಯ್ಡ್, ಅಲ್ಕಲಾಯ್ಡ್, ಫ್ಲೇವನಾಯ್ಡ್ ಮತ್ತು ಗ್ಲೈಕೋಸೈಡ್ ಅಂಶಗಳು ಇರುವುದು ಕಂಡು ಬಂದಿದೆ.
ಹೀಗಾಗಿ ಅವರು ತಮ್ಮ ಸಂಶೋಧನೆಯಲ್ಲಿ ಇಲಿಗಳ ಮೇಲೆ ಪ್ರಯೋಗ ಮಾಡಿ ಅಸ್ತಮಾ ಮತ್ತು ಇನ್ನಿತರ ಕೆಲವೊಂದು ಅಲರ್ಜಿ ಸಮಸ್ಯೆಗಳಿಗೆ ತೊಂಡೆಕಾಯಿ ಪರಿಹಾರವಾಗಿ ಕೆಲಸ ಮಾಡಬಲ್ಲದು ಎಂದು ವೈಜ್ಞಾನಿಕವಾಗಿ ಸಾಬೀತು ಮಾಡಿದ್ದಾರೆ.
ಮಾರಕ ಕ್ಯಾನ್ಸರ್ ವಿರುದ್ಧ ರಕ್ಷಣೆ
ತೊಂಡೆಕಾಯಿಗಳಿಂದ ಕೇವಲ ಮೇಲಿನ ಸಣ್ಣ ಪುಟ್ಟ ಉಪಯೋಗಗಳು ಮಾತ್ರ ಲಭ್ಯವಾಗುತ್ತವೆ ಎಂದು ನೀವು ತಿಳಿದುಕೊಂಡಿದ್ದರೆ, ಖಂಡಿತ ಅದು ತಪ್ಪು. ಗುಣಪಡಿಸಲಾಗದ ಕ್ಯಾನ್ಸರ್ ರೋಗದ ವಿರುದ್ಧ ಹೊರಡುವಂತಹ ಶಕ್ತಿ ತೊಂಡೆಕಾಯಿಗಳಿಗೆ ಇದೆ ಎಂದು ಕಂಡು ಬಂದಿದೆ.
ತೊಂಡೆಕಾಯಿ ಪಲ್ಯ, ಸಾರು, ಸಾಗು ಇತ್ಯಾದಿಗಳನ್ನು ನಿತ್ಯ ನಿಯಮಿತವಾಗಿ ಸೇವಿಸುವ ಅಭ್ಯಾಸ ಮಾಡಿಕೊಂಡರೆ ಮನುಷ್ಯನನ್ನು ಕ್ಯಾನ್ಸರ್ ಮಹಾಮಾರಿಯ ಹಾವಳಿಯಿಂದ ತಪ್ಪಿಸುತ್ತದೆ ಎಂದು ನಂಬಲಾಗಿದೆ.
ಇದರಲ್ಲಿರುವ ಹೇರಳವಾದ ನೈಸರ್ಗಿಕ ಆಂಟಿ – ಆಕ್ಸಿಡೆಂಟ್ ಅಂಶಗಳು ಮನುಷ್ಯನ ದೇಹವನ್ನು ಫ್ರೀ ರಾಡಿಕಲ್ ಗಳ ಹಾವಳಿಯಿಂದ ಕಾಪಾಡುತ್ತದೆ. ಇದರಿಂದ ದೇಹದಲ್ಲಿ ಜೀವಕೋಶಗಳಿಗೆ ಮತ್ತು ಡಿ ಎನ್ ಎ ಅಂಶಗಳಿಗೆ ಹಾನಿಯಾಗುವುದು ತಪ್ಪುತ್ತದೆ.