ವಾಷಿಂಗ್ಟನ್: ತನ್ನ ಐದು ವರ್ಷದ ಮಗಳನ್ನು ಕೊಂದುಆಕೆಯ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ, ತಾನು ಕೆಲಸ ಮಾಡುವ ರೆಸ್ಟೋರೆಂಟ್ಗೆ ಕೊಂಡೊಯ್ದ ಘಟನೆ ಅಮೆರಿಕದಲ್ಲಿ ನಡೆದಿದೆ.
34 ವರ್ಷದ ಆರೋಪಿ ತಂದೆ ಆಡಮ್ ತನ್ನ 5 ವರ್ಷದ ಮಗಳು ಹಾರ್ಮೊನಿಯನ್ನು ಹೊಡೆದು ಕೊಂದಿದ್ದಾನೆ. ಆರೋಪಿಯು ತನ್ನ ಕೆಲಸದ ಸ್ಥಳಕ್ಕೆ ಕೊಂಡೊಯ್ಯುವ ಚೀಲದಲ್ಲಿ ಮಗಳ ಕೊಳೆತ ದೇಹದ ಭಾಗಗಳನ್ನು ತುಂಬಿಸಿ, ‘ಹಳೆಯ ಕಸ’ ಎಂಬಂತೆ ಎಸೆದಿದ್ದ. ಆಕೆಯ ದೇಹದ ಭಾಗಗಳು ಇನ್ನೂ ಪತ್ತೆಯಾಗಿಲ್ಲ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ಆರೋಪಿಯು ರೆಸ್ಟೋರೆಂಟ್ನಲ್ಲಿ ಅಡುಗೆ ಹಾಗೂ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದು, ತನ್ನ ಕೆಲಸದ ಪಾಳಿಯ ವೇಳೆ ಫ್ರೀಜರ್ನಲ್ಲಿ ಆಹಾರ ಪದಾರ್ಥಗಳ ಪಕ್ಕದಲ್ಲಿ ಮಗಳ ಅಂಗಾಂಗಗಳನ್ನು ಇರಿಸಿದ್ದ ಎಂದು ವರದಿಯಾಗಿದೆ.
“ಆತ ಯಾವಾಗಲೂ ಕೆಲಸಕ್ಕೆ ಬರುವಾಗ ಬ್ಯಾಗ್ ತರುತ್ತಿದ್ದ. ಈಗಲೂ ಚೀಲವನ್ನು ತಂದು ಫ್ರೀಜರ್ನಲ್ಲಿ ಇರಿಸುತ್ತಿದ್ದ. ಫ್ರೀಜರ್ನಲ್ಲಿ ಆಹಾರ ಮತ್ತು ಪದಾರ್ಥಗಳನ್ನು ಇಡಲಾಗುತ್ತದೆ. ಆತ ಚೀಲವನ್ನು ಒಳಗೆ ತರುವುದು ಹಾಗೂ ಹೊರಗೆ ಕೊಂಡೊಯ್ಯುವುದನ್ನು ಜನರು ನೋಡಿದ್ದರು. ಆದರೆ ಆ ಚೀಲದಲ್ಲಿ ಏನಿದೆ ಎಂದು ಯಾರಿಗೂ ಊಹಿಸಲು ಸಾಧ್ಯವಾಗಿರಲಿಲ್ಲ” ಎಂದು ಪ್ರಾಸಿಕ್ಯೂಟರ್ ಕ್ರಿಸ್ಟೋಫರ್ ನೋವೆಲ್ಸ್ ತಿಳಿಸಿದ್ದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಆಡಂನ ಕುಟುಂಬವನ್ನು ಮನೆಯಿಂದ ಹೊರ ಹಾಕಿದ್ದರಿಂದ ಅವರು ಕಾರಿನಲ್ಲಿಯೇ ವಾಸವಿದ್ದರು. ಕಾರಿನಲ್ಲಿ ಹಾರ್ಮೊನಿ ಎರಡು ಬಾರಿ ಶೌಚ ಮಾಡಿಕೊಂಡಿದ್ದಳು. ಇದರಿಂದ ಕೋಪಗೊಂಡಿದ್ದ ಆಡಂ, ಆಕೆಗೆ ಹಲವು ಬಾರಿ ಬಲವಾಗಿ ಗುದ್ದಿದ್ದ ಎಂದು ಆತನಿಂದ ದೂರವಾಗಿರುವ ಹೆಂಡತಿ ಕಾಯ್ಲಾ ಮಾಂಟ್ಗೋಮೆರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಾರು ಚಾಲನೆ ಮಾಡಿ ತೆರಳಿದ್ದ ಆಡಂ, ಊಟ ಮಾಡಿ, ಡ್ರಗ್ಸ್ ಸೇವಿಸಿದ್ದ. ಅಸಹಾಯಕಳಾಗಿದ್ದ ಮಗಳು ಕಾರಿನ ಹಿಂದಿನ ಸೀಟಿನಲ್ಲಿ ಅಳುತ್ತಾ ಮಲಗಿದ್ದಳು. ಕೆಲವು ಗಂಟೆಗಳ ಬಳಿಕ ನೋಡಿದಾಗ ಆಕೆ ಮೃತಪಟ್ಟಿದ್ದಳು. ಸಾಕ್ಷ್ಯ ನಾಶಾ ಮಾಡುವ ಸಲುವಾಗಿ ಆರೋಪಿಯು ಮಗಳ ಶವವನ್ನು ಆಡಂ, ತನ್ನ ಸ್ನೇಹಿತನ ಕಾರಿನ ಡಿಕ್ಕಿಯಲ್ಲಿ, ಅತ್ತೆಯ ಮನೆಯ ಕೂಲರ್ನಲ್ಲಿ, ಫ್ರೀಜರ್ನಲ್ಲಿ ಕೂಡ ಇರಿಸಿದ್ದ ಎನ್ನಲಾಗಿದೆ. ಬಳಿಕ ಗರಗಸ ಹಾಗೂ ಬ್ಲೇಡ್ಗಳನ್ನು ಖರೀದಿಸಿದ್ದ. ಶವವನ್ನು ವಿಲೇವಾರಿ ಮಾಡಲು ಟ್ರಕ್ ಬಾಡಿಗೆಗೆ ಪಡೆದಿದ್ದ ಎಂದು ವರದಿಯಾಗಿದೆ.