ಬೆಂಗಳೂರು:- ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಇಂದು ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಈ ಹಿನ್ನೆಲೆ ಬೆಳಗಿನ ಅವಧಿಯಲ್ಲಿ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಈ ಬಗ್ಗೆ ಬಿಎಂಆರ್ಸಿಎಲ್ ಮಾಹಿತಿ ನೀಡಿದೆ. ” ಬೆಂಗಳೂರು ಮೆಟ್ರೋ ರೈಲು ನಿಗಮವು ಇಂದು ಟ್ರಿನಿಟಿ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳನಡುವೆ ನೇರಳೆ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳುತ್ತಿದೆ. ಈ ಕಾಮಗಾರಿಯನ್ನು ನಿರ್ವಹಿಸಲು ನೇರಳೆ ಮಾರ್ಗದ ಎಂ.ಜಿ. ರಸ್ತೆ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ ವಾಣಿಜ್ಯ ಸೇವೆಯನ್ನು ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.
ಈ ಅವಧಿಯಲ್ಲಿ ರೈಲುಗಳು ಎಂ.ಜಿ ರಸ್ತೆ ಮತ್ತು ಚಲ್ಲಘಟ್ಟ ಹಾಗೂ ಇಂದಿರಾನಗರ ಮತ್ತು ವೈಟ್ಫೀಲ್ಡ್ (ಕಾಡುಗೋಡಿ) ನಡುವೆ ಮಾತ್ರ ಬೆಳಿಗ್ಗೆ 7 ಗಂಟೆಯಿಂದ ಚಲಿಸುತ್ತವೆ. ಬೆಳಿಗ್ಗೆ 9 ಗಂಟೆಯ ನಂತರ ವೈಟ್ಫೀಲ್ಡ್ (ಕಾಡುಗೋಡಿ) ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವಿನ ಸಂಪೂರ್ಣ ನೇರಳೆ ಮಾರ್ಗದಲ್ಲಿ ವೇಳಾಪಟ್ಟಿಯಂತೆ ಮೆಟ್ರೋ ರೈಲು ಸೇವೆಗಳು ಲಭ್ಯವಿರುತ್ತವೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ
ಹಸಿರು ಮಾರ್ಗದಲ್ಲಿ ರೈಲುಗಳ ಸೇವೆ ಆಯಾ ಟರ್ಮಿನಲ್ ನಿಲ್ದಾಣಗಳಿಂದ ವೇಳಾಪಟ್ಟಿಯ ಪ್ರಕಾರ ಬೆಳಿಗ್ಗೆ 7.00 ಗಂಟೆಗೆ ಪ್ರಾರಂಭವಾಗಿ ಎಂದಿನಂತೆ ಚಲಿಸುತ್ತವೆ. ಇನ್ನು ನಮ್ಮ ಮೆಟ್ರೋ ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಿಕೊಂಡು ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ಬಿಎಂಆರ್ಸಿಎಲ್ ಮನವಿ ಮಾಡಿದೆ.