ವಾಷಿಂಗ್ಟನ್ : ಪಾಕಿಸ್ತಾನದಲ್ಲಿ ಫೆಬ್ರವರಿ 8ರಂದು ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ವ್ಯಾಪಕ ಹಿಂಸಾಚಾರ, ಅಕ್ರಮ ನಡೆದಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅಮೆರಿಕ, ಬ್ರಿಟನ್ ಮತ್ತು ಯುರೋಪಿಯನ್ ಚುನಾವಣಾ ಪ್ರಕ್ರಿಯೆಯ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿವೆ.
ಮಾಜಿ ಪ್ರಧಾನಿಗಳಾದ ನವಾಝ್ ಷರೀಫ್ ಅವರ ಪಿಎಂಎಲ್-ಎನ್ ಪಕ್ಷ ಹಾಗೂ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಬೆಂಬಲಿತರ ನಡುವೆ ನಿಕಟ ಸ್ಫರ್ಧೆ ನಡೆದಿದ್ದು ಎರಡೂ ಪಕ್ಷಗಳು ಚುನಾವಣೆಯಲ್ಲಿ ಗೆಲುವು ತಮ್ಮದೇ ಎಂದು ಘೋಷಿಸಿವೆ. ರಾಷ್ಟ್ರೀಯ ಅಸೆಂಬ್ಲಿಯ 265 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಸರಳ ಬಹುಮತಕ್ಕೆ 133 ಸ್ಥಾನಗಳ ಅಗತ್ಯವಿದೆ.
ಚುನಾವಣೆಯಲ್ಲಿ ಹಸ್ತಕ್ಷೇಪ, ಅಕ್ರಮ, ವಂಚನೆ, ಮತದಾರರನ್ನು ಬೆದರಿಸಿರುವುದು, ಕಾರ್ಯಕರ್ತರ ಬಂಧನ, ಪ್ರಮುಖ ಮುಖಂಡರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಿರುವುದು, ಮತ ಎಣಿಕೆಯಲ್ಲಿ ಅಕ್ರಮ ಮುಂತಾದ ಆರೋಪಗಳ ಬಗ್ಗೆ ಸಂಪೂರ್ಣ ತನಿಖೆ ನಡೆಯುವ ಅಗತ್ಯವಿದೆ ಎಂದು ಅಮೆರಿಕ ಹಾಗೂ ಯುರೋಪಿಯನ್ ಯೂನಿಯನ್ ಆಗ್ರಹಿಸಿದೆ.
ಪಾಕ್ ಚುನಾವಣೆ: ಇಮ್ರಾನ್ ಖಾನ್ ಬೆಂಬಲಿತ ಸ್ವತಂತ್ರರು ಗೆಲುವು, ಏಕೀಕೃತ ಸರ್ಕಾರಕ್ಕೆ ಕರೆ
ವಾಕ್ಸ್ವಾತಂತ್ರ್ಯ, ಸಭೆ ಸೇರುವ ಸ್ವಾತಂತ್ರ್ಯ, ಇಂಟರ್ನೆಟ್ ಸಂಪರ್ಕ ನಿರ್ಬಂಧಿಸಿರುವುದು, ಮಾಧ್ಯಮದವರ ಮೇಲೆ ದಾಳಿ ನಡೆಸಿರುವ ವರದಿಯಿದೆ. ಫಲಿತಾಂಶ ಘೋಷಣೆಯಲ್ಲಿ ಮಿಲಿಟರಿ ಹಸ್ತಕ್ಷೇಪದ ಬಗ್ಗೆ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ , ತನಿಖೆ ನಡೆಸುವವರೆಗೆ ಚುನಾವಣೆಯ ಫಲಿತಾಂಶವನ್ನು ಮಾನ್ಯ ಮಾಡದಂತೆ ಅಮೆರಿಕದ ಡೆಮೊಕ್ರಟಿಕ್ ಸಂಸದರಾದ ರೋ ಖನ್ನಾ ಮತ್ತು ಇಹಾನ್ ಉಮರ್ ಅಮೆರಿಕ ಸರಕಾರವನ್ನು ಒತ್ತಾಯಿಸಿದ್ದಾರೆ.