ರಾವಲ್ಪಿಂಡಿ: ಪಾಕಿಸ್ತಾನದಲ್ಲಿ ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ಬೆಂಬಲಿತರು 100 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ “ಏಕೀಕೃತ” ಸರ್ಕಾರಕ್ಕೆ ಕರೆ ನೀಡಿದ್ದಾರೆ.
ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆದ ಎರಡು ದಿನಗಳ ನಂತರ ದೇಶ ಅತಂತ್ರ ಸಂಸತ್ ಹೊಂದುವ ಹಾದಿಯಲ್ಲಿದೆ ಎಂಬ ಅಂಶದ ಹಿನ್ನೆಲೆಯಲ್ಲಿ ಮುನೀರ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಗುರುವಾರ ನಡೆದ ಚುನಾವಣೆಯಲ್ಲಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷ ಬೆಂಬಲಿತ ಸ್ವತಂತ್ರರು 101 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) 73 ಸ್ಥಾನಗಳನ್ನು, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 54, ಮುತಾಹಿದಾ ಕ್ವಾಮಿ ಮೂವ್ಮೆಂಟ್ (ಎಂಕ್ಯೂಎಂ) 17 ಮತ್ತು ಇತರ ಸ್ಥಾನಗಳನ್ನು ಸಣ್ಣ ಪಕ್ಷಗಳಿಗೆ ನೀಡಲಾಗಿದೆ. 265 ಸ್ಥಾನಗಳ ಪೈಕಿ 255 ಸ್ಥಾನಗಳ ಫಲಿತಾಂಶವನ್ನು ಪಾಕಿಸ್ತಾನದ ಚುನಾವಣಾ ಆಯೋಗ ಘೋಷಿಸಿದೆ.
ಸರ್ಕಾರ ರಚಿಸಲು ಪಕ್ಷವೊಂದು ರಾಷ್ಟ್ರೀಯ ಅಸೆಂಬ್ಲಿಯ 265 ಸ್ಥಾನಗಳ ಪೈಕಿ 133 ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಅಭ್ಯರ್ಥಿಯ ಮರಣದ ನಂತರ ಒಂದು ಸ್ಥಾನಕ್ಕೆ ಚುನಾವಣೆಯನ್ನು ಮುಂದೂಡಲಾಗಿದೆ. ತನ್ನ 75-ಕ್ಕೂ ಹೆಚ್ಚು ವರ್ಷಗಳ ಅಸ್ತಿತ್ವದ ಅರ್ಧಕ್ಕಿಂತ ಹೆಚ್ಚು ಕಾಲ ದಂಗೆ-ಪೀಡಿತ ಪಾಕಿಸ್ತಾನವನ್ನು ಆಳಿದ ಪ್ರಬಲ ಪಾಕಿಸ್ತಾನದ ಸೇನೆಯು ಭದ್ರತೆ ಮತ್ತು ವಿದೇಶಾಂಗ ನೀತಿಯ ವಿಷಯಗಳಲ್ಲಿ ಸಾಕಷ್ಟು ಅಧಿಕಾರವನ್ನು ಹೊಂದಿದೆ.
ಶನಿವಾರ, ಸೇನೆಯ ಮಾಧ್ಯಮ ವಿಭಾಗವು ಹೊರಡಿಸಿದ ಸೇನಾ ಮುಖ್ಯಸ್ಥರ ಹೇಳಿಕೆಯಲ್ಲಿ ಪಾಕಿಸ್ತಾನಿ ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಮುಕ್ತ ಮತ್ತು ಅಡೆತಡೆಯಿಲ್ಲದೆ ಭಾಗವಹಿಸುವುದು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಳ್ವಿಕೆಗೆ ಅವರ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದಿದ್ದಾರೆ.