ವಾಷಿಂಗ್ಟನ್: ಅಮೆರಿಕದಲ್ಲಿ ಮತ್ತೋರ್ವ ಭಾರತೀಯ ಯುವಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಹೊಸ ವರ್ಷಾರಂಭದಲ್ಲೇ ಅಮೆರಿಕದಲ್ಲಿ ಒಟ್ಟು ಐವರು ಭಾರತೀಯನ್ನು ಕೊಲೆ ಮಾಡಲಾಗಿದೆ.
ವಾಷಿಂಗ್ಟನ್ನ ರೆಸ್ಟೊರೆಂಟ್ನ ಹೊರಗೆ ನಡೆದ ಜಗಳದಲ್ಲಿ ಮಾರಣಾಂತಿಕ ಗಾಯಗೊಂಡಿದ್ದ ಭಾರತೀಯ- ಅಮೆರಿಕನ್ ಎಕ್ಸಿಕ್ಯೂಟಿವ್ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಮೂಲದ, ವರ್ಜೀನಿಯಾದ ನಿವಾಸಿ ವಿವೇಕ್ ತನೇಜಾ ಮೃತಪಟ್ಟ ವ್ಯಕ್ತಿ. ಫೆಬ್ರವರಿ 2ರಂದು ವಿವೇಕ್, ಅವರ ಇಬ್ಬರು ಸಹೋದರಿಯರು ಹಾಗೂ ಶಂಕಿತ ಆರೋಪಿ ಜಪಾನೀಸ್ ರೆಸ್ಟೋರೆಂಟ್ನಲ್ಲಿ ಇದ್ದರು. ಆರೋಪಿಯು ವಿವೇಕ್ನನ್ನು ನೆಲಕ್ಕೆ ಕೆಡವಿ ಅವರ ತಲೆಯನ್ನು ಪಾದಚಾರಿ ಮಾರ್ಗಕ್ಕೆ ಗುದ್ದಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ 41 ವರ್ಷದ ವಿವೇಕ್ ತನೇಜಾ ಬೆಳಗಿನ ಜಾವ 2 ಗಂಟೆ ಸುಮಾರಿಗೆ ರೆಸ್ಟೋರೆಂಟ್ ಬಿಟ್ಟಿದ್ದರು. ಹತ್ತಿರದ ಬೀದಿಯಲ್ಲಿ ಜಗಳ ಆರಂಭವಾಯಿತು. ದಾಳಿಯಲ್ಲಿ ವಿವೇಕ್ ಪ್ರಜ್ಞೆ ಕಳೆದುಕೊಂಡರು. ಪೊಲೀಸರು ಆಗಮಿಸಿ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಗಾಯಗೊಂಡಿದ್ದ ಅವರು ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ವರದಿ ತಿಳಿಸಿದೆ.
ಸಿಸಿಟಿವಿಯಲ್ಲಿ ಕಾಣಿಸಿಕೊಂಡಿರುವ ಶಂಕಿತನಿಗಾಗಿ ಶೋಧ ನಡೆಸಲಾಗುತ್ತಿದ್ದು, ಆತನ ಗುರುತು ಪತ್ತೆಯಾಗಿಲ್ಲ. ಆತನ ಬಂಧನ ಮತ್ತು ಶಿಕ್ಷೆಗೆ ಕಾರಣವಾಗುವ ಮಾಹಿತಿಯನ್ನು ಒದಗಿಸುವವರಿಗೆ ಪೊಲೀಸರು $25,000 ಬಹುಮಾನ ಘೋಷಿಸಿದ್ದಾರೆ. ಅಮೆರಿಕದಲ್ಲಿ ಕಳೆದ ಹದಿನೈದು ದಿನಗಳಲ್ಲಿ ಆರು ಮಂದಿ ಭಾರತೀಯ ಮೂಲದವರು ಅಸಹಜವಾಗಿ ಮೃತಪಟ್ಟಿದ್ದಾರೆ.