ಬೆಂಗಳೂರು: ಬಿಜೆಪಿ (BJP) ವತಿಯಿಂದ ಫೆಬ್ರವರಿ 9, 10, 11ರಂದು 3 ದಿನಗಳ ಕಾಲ ‘ಗ್ರಾಮ ಚಲೋ’ (Grama Chalo) ಅಭಿಯಾನ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದರು.
ಹೆಚ್. ಗೊಲ್ಲಹಳ್ಳಿ ಗ್ರಾಮದಲ್ಲಿ ‘ಗ್ರಾಮ ಚಲೋ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾಜೀ ಮತ್ತು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ (Narendra Modi) ಅವರ ಅಪೇಕ್ಷೆಯಂತೆ ‘ಗ್ರಾಮ ಚಲೋ’ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ಕರ್ನಾಟಕ ರಾಜ್ಯದಲ್ಲಿ 28 ಸಾವಿರಕ್ಕೂ ಹೆಚ್ಚು ಹಳ್ಳಿಗಳು, 19 ಸಾವಿರ ನಗರ ಬೂತ್ಗಳಲ್ಲಿ ಒಟ್ಟಾರೆಯಾಗಿ 42 ಸಾವಿರ ಕಾರ್ಯಕರ್ತರು ಮೂರು ದಿನಗಳ ಕಾಲ ನಿರಂತರವಾಗಿ ಈ ಅಭಿಯಾನದಲ್ಲಿ ಭಾಗವಹಿಸುತ್ತಾರೆ ಎಂದು ವಿವರಿಸಿದರು
ನಾನು ಇವತ್ತು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ಸಂಖ್ಯೆ 454, 455ರಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿದ್ದೇನೆ. 2047ನೇ ಇಸವಿಗೆ ಭಾರತವು ‘ವಿಕಸಿತ ಭಾರತ’ವಾಗಿ ಪರಿವರ್ತನೆ ಹೊಂದಬೇಕು. ಭಾರತವು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತನೆ ಕಾಣಬೇಕೆಂಬ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರ ಕನಸು ನನಸಾಗಲು ಗ್ರಾಮಗಳೂ ಅಭಿವೃದ್ಧಿ ಹೊಂದಬೇಕಿದೆ ಎಂದು ವಿಶ್ಲೇಷಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳು ಸಿಗಬೇಕು ಎಂದರು