ಒಡಿಶಾ ನಟ ಹಾಗೂ ಸಂಸದ ಅನುಭವ್ ಮೊಹಂತಿ ಪತ್ನಿ ವರ್ಷಾ ಪ್ರಿಯಾದರ್ಶಿನಿ ಅವರಿಂದ ದೂರವಾಗಿದ್ದಾರೆ. ಈ ಮೂಲಕ ತಮ್ಮ 10 ವರ್ಷಗಳ ಸಾಂಸಾರಿಕ ಜೀವನವನ್ನು ಕೊನೆಗೊಳಿಸಿದ್ದಾರೆ. ಸದ್ಯ ಜೋಡಿಗೆ ಡಿವೋರ್ಸ್ ಸಿಕ್ಕಿದ್ದು ಈ ಬಗ್ಗೆ ಅನುಭವ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ನನಗಾಗಿ ಮತ್ತು ನನ್ನ ಕುಟುಂಬದ ಶಾಂತಿ, ನೆಮ್ಮದಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. 10 ವರ್ಷ ಪೂರ್ಣಗೊಳ್ಳುವ ಒಂದು ದಿನ ಮುಂಚಿತವಾಗಿ ನಿಷ್ಪ್ರಯೋಜಕ, ಅರ್ಥಹೀನ, ಹೃದಯಹೀನ, ನೋವಿನ ಮತ್ತು ಸುಳ್ಳಿನಿಂದ ಕೂಡಿದ ಈ ದಾಂಪತ್ಯ ಜೀವನಕ್ಕೆ ಅಂತ್ಯ ಸಿಕ್ಕಿದೆ. ವಿಚ್ಛೇದನದ ತೀರ್ಪು ಸಿಕ್ಕಿತು. ನಾನು ಅವಳ ಸಂತೋಷಕ್ಕಾಗಿ ಪ್ರಾರ್ಥಿಸುತ್ತೇನೆ. ಇದರಲ್ಲಿ ಯಾವುದೇ ಅಪರಾಧವಿಲ್ಲ. ಹ್ಯಾಪಿ ರೋಸ್ ಡೇ ಎಂದು ಅನುಭವ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರಾಜಕೀಯ ಜೀವನ ಆರಂಭಕ್ಕೂ ಮುನ್ನು ಸಿನಿಮಾರಂಗದಲ್ಲಿ ಅನುಭವ್ ಸಾಕಷ್ಟು ಹೆಸರು ಮಾಡಿದ್ದರು. 2013ರಲ್ಲಿ ರಾಜಕೀಯಕ್ಕೆ ಎಂಟ್ರಿಕೊಟ್ಟ ಮೊಹಂತಿ 2014ರಲ್ಲಿ ರಾಜ್ಯಸಭಾ ಸಂಸದರಾದರು. 2019ರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರಪಾರ ಲೋಕಸಭಾ ಕ್ಷೇತ್ರದಿಂದ ಬೈಜಯಂತ್ ಪಾಂಡಾ ವಿರುದ್ಧ ಗೆದ್ದಿದ್ದರು. ಇದೀಗ ನೆಚ್ಚಿನ ನಟ ಹಾಗೂ ರಾಜಕಾರಣಿಯ ಡಿವೋರ್ಸ್ ವಿಷಯ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.