ಬೆಂಗಳೂರು:- ನಾನ್ ವೆಜ್ ತಿಂದು ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳಬೇಡಿ. ಊಟ, ತಿಂಡಿ ತಿನ್ನೋದು, ಬಟ್ಟೆ ಹಾಕುವುದರ ಬಗ್ಗೆ ಮಾತಾಡಕ್ಕಾಗುತ್ತಾ? ಬಡವರ ಸಮಸ್ಯೆ ಹಾಗೂ ನಿರುದ್ಯೋಗ ಇದೆಲ್ಲ ಮಾತಾಡೋಣ. ಅದನ್ನು ಬಿಟ್ಟು ಮಾಂಸ ಸೇವಿಸಿ ಮಠಕ್ಕೆ ಭೇಟಿ ಹೀಗೆಲ್ಲಾ ಕೇಳಬೇಡಿ ಎಂದು ಗರಂ ಆದರು.
ಇನ್ನೂ ಬುಧವಾರ ದೆಹಲಿಯಲ್ಲಿ ನಡೆದ ನಮ್ಮ ತೆರಿಗೆ ನಮ್ಮ ಹಕ್ಕ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರದ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದರು. ಜಂತರ್ ಮಂತರ್ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಭೋಜನಕೂಟದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಆದ್ರೆ, ಅವರು ಮಧ್ಯಾಹ್ನ ಮಾಂಸದ ಊಟ ಮಾಡಿ ಬಳಿಕ ನೇರವಾಗಿ ದೆಹಲಿಯಿಂದ ಮೈಸೂರಿಗೆ ಬಂದಿದ್ದಾರೆ. ಬಳಿಕ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಸುತ್ತೂರು ಮಠಕ್ಕೆ ಭೇಟಿ ನೀಡಿ ಜಾತ್ರೆಯಲ್ಲಿ ಭಾಗವಹಿಸಿದ್ದಾರೆ. ಹೀಗೆ ಮಾಂಸದೂಟ ಮಾಡಿದ ಬೆನ್ನಿಗೇ ಸುತ್ತೂರು ಜಾತ್ರೆಯಲ್ಲಿ ಭಾಗಿಯಾಗಿದ್ದು, ಗದ್ದುಗೆ ಭೇಟಿ ಮಾಡಿದ್ದು ಎಷ್ಟು ಸರಿ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಈ ಹಿಂದೆ ಮಾಂಸದ ಊಟ ಮಾಡಿ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ ಆಪಾದನೆಯಿಂದ ವಿವಾದಕ್ಕೆ ಸಿಎಂ ಸಿದ್ದರಾಮಯ್ಯ ಸಿಲುಕಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಪರ-ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಅಂಥಹುದೇ ಒಂದು ವಿವಾದ ಸುತ್ತಿಕೊಂಡಿದೆ.