ಒಣದ್ರಾಕ್ಷಿ ತಯಾರಾಗುವ ಸಂದರ್ಭದಲ್ಲೇ ಅದರ ದರ ಕುಸಿದು ರೈತರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಭಾರಿ ಇಳುವರಿ ಬಂದರೂ ಸಮರ್ಪಕ ಬೆಲೆ ಸಿಗದೇ ದ್ರಾಕ್ಷಿ ಬೆಳೆಗಾರ ಕಂಗಾಲಾಗಿದ್ದಾನೆ.
ಒಣದ್ರಾಕ್ಷಿ ದರದಲ್ಲಿ ಭಾರಿ ಕುಸಿತದಿಂದ ಬೆಳೆಗಾರರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಮಧ್ಯವರ್ತಿಗಳ ಹಾವಳಿಗೆ ತತ್ತರಿಸಿ ಹೋಗಿದ್ದಾರೆ. ಪ್ರತಿ ವರ್ಷ 170ರಿಂದ 220 ರೂ.ಗಳವರೆಗೆ ಒಣ ದ್ರಾಕ್ಷಿ ಮಾರಾಟವಾಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿಕೇವಲ 30ರಿಂದ 100 ರೂ. ಪ್ರತಿ ಕೆಜಿಗೆ ಒಣ ದ್ರಾಕ್ಷಿ ಮಾರಾಟವಾಗುತ್ತಿದೆ. ಹೀಗಾಗಿ ಈ ಬಾರಿಯೂ ದ್ರಾಕ್ಷಿ ಬೆಳೆದ ರೈತ ಕೈ ಸುಟ್ಟುಕೊಳ್ಳುವಂತಾಗಿದೆ.
ಒಣದ್ರಾಕ್ಷಿ ದರ ಪಾತಾಳಕ್ಕೆ ಹೋಗಿದ್ದರಿಂದ ಅನಿವಾರ್ಯವಾಗಿ ಕೋಲ್ಡ್ ಸ್ಟೋರೇಜ್ನಲ್ಲಿ ಇಡುವಂತಾಗಿದ್ದು, ಅದರ ಬಾಡಿಗೆ ಪಾವತಿಸಬೇಕಿದೆ. ವರ್ಷವಿಡಿ ಕಷ್ಟಪಟ್ಟು ದುಡಿದು ಬೆಳೆದ ದ್ರಾಕ್ಷಿ ಬೆಳೆಗೆ ಸಮರ್ಪಕ ದರ ಸಿಗದೆ ಅದನ್ನು ರಕ್ಷಿಸಲು ಕೋಲ್ಡ್ ಸ್ಟೋರೇಜ್ಗಳಿಗೆ ಮೊರೆ ಹೋಗುವುದರಿಂದ ಬಂದ ಅಲ್ಪಸ್ವಲ್ಪ ಲಾಭ ಕೂಡ ಬೇರೆಯೊಬ್ಬರ ಪಾಲಾಗುವಂತಾಗಿದೆ.
ಹಾನಿಯಾದ ಬೆಳೆಗೆ ವಿಮೆ ಕಂಪನಿಗಳು ಹೆಚ್ಚಿನ ಪರಿಹಾರ ನೀಡುತ್ತೇವೆ ಎಂದು ಹೇಳಿ ರೈತರಿಗೆ ವಿಮೆ ಮಾಡಿಸಲು ಒತ್ತಾಯಿಸುತ್ತವೆ. ಆದರೆ, ಪರಿಹಾರ ನೀಡುವಾಗ ಕಡಿಮೆ ಪ್ರಮಾಣದ ವಿಮೆ ಹಣ ನೀಡಿ ವಂಚಿಸಲಾಗುತ್ತಿದೆ.