ಇಸ್ಲಮಾಬಾದ್: ಇಸ್ಲಮಾಬಾದ್ನ ಬನಿಗಾಲದಲ್ಲಿ ಇರುವ ತನ್ನ ಮನೆಯನ್ನು ಸಬ್ಜೈಲೆಂದು ಘೋಷಿಸುವ ಅಧಿಕಾರಿಗಳ ಕ್ರಮವನ್ನು ತಡೆಯಬೇಕು ಮತ್ತು ತನ್ನನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿಗೆ ಸ್ಥಳಾಂತರಿಸಬೇಕು ಎಂದು ಕೋರಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪತ್ನಿ ಬುಷ್ರಾ ಬೀಬಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ತೋಷಖಾನ ಭ್ರಷ್ಟಾಚಾರ ಪ್ರಕರಣ ಸಂಬಂಧ ಇಮ್ರಾನ್ಖಾನ್ ದಂಪತಿಗೆ ವಿಶೇಷ ನ್ಯಾಯಾಲಯ 14 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಇಮ್ರಾನ್ ಖಾನ್ ರನ್ನು ಅಡಿಯಾಲಾ ಜೈಲಿನಲ್ಲಿ ಹಾಗೂ ಬುಷ್ರಾ ಬೀಬಿಯನ್ನು ಅವರ ಮನೆಯಲ್ಲೇ ಗೃಹ ಬಂಧನದಲ್ಲಿ ಇರಿಸಲಾಗಿದೆ. ಜೊತೆಗೆ ಅವರ ಮನೆಯನ್ನು ಸಬ್ಜೈಲು ಎಂದು ಘೋಷಿಸಲು ಅಧಿಕಾರಿಗಳು ನಿರ್ಧರಿಸಿದ್ದು ಇದನ್ನು ತಡೆಯುವಂತೆ ಬುಷ್ಟಾ ಬೀಬಿ ಕೋರ್ಟ್ ಮೊರೆ ಹೋಗಿದ್ದಾರೆ.
ತಾನು ಸಾಮಾನ್ಯ ಕೈದಿಯಂತೆ ಅಡಿಯಾಲಾ ಜೈಲಿನಲ್ಲಿ ಇರಲು ಬಯಸುತ್ತೇನೆ. ಸಬ್ಜೈಲು ಎಂದು ಸರಕಾರ ಘೋಷಿಸಿರುವ ತನ್ನ ಮನೆಯಲ್ಲಿ ಒಬ್ಬಂಟಿಯಾಗಿರುವುದರಿಂದ ನನಗೆ ಜೀವ ಭಯ ಎದುರಾಗಿದೆ. ಗುರುತಿಸಲಾಗದ ವ್ಯಕ್ತಿಗಳು ಮನೆಗೆ ಬಂದು ಹೋಗುತ್ತಿರುವುದು ಅಭದ್ರತೆಯ ಭಾವನೆಯನ್ನು ಮೂಡಿಸಿದೆ. ಆದ್ದರಿಂದ ಮನೆಯನ್ನು ಸಬ್ಜೈಲು ಎಂದು ಘೋಷಿಸಿರುವ ಕ್ರಮಕ್ಕೆ ತಡೆನೀಡಿ, ತನ್ನನ್ನು ಅಡಿಯಾಲಾ ಜೈಲಿಗೆ ಸ್ಥಳಾಂತರಿಸಬೇಕು ಎಂದು ಬುಷ್ರಾ ಬೀಬಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.