ಕೆಲವೊಂದು ಸಿನಿಮಾಗಳು ಸೆಟ್ಟೇರುವುದಕ್ಕೂ ಮುನ್ನವೇ ಭರ್ಜರಿ ಸೌಂಡು ಮಾಡುತ್ತವೆ. ಮೇಕಿಂಗ್, ಬಜೆಟ್, ಬೃಹತ್ ತಾರಾಗಣ, ನೂರಾರು ದಿನಗಳ ಚಿತ್ರೀಕರಣ, ಸ್ಟಾರ್ ಮಟ್ಟದ ತಾಂತ್ರಿಕ ಬಳಗ… ಹೀಗೆ ನಾನಾ ಕಾರಣಗಳಿಂದಾಗಿ ಪ್ರೇಕ್ಷಕರ ಗಮನ ಸೆಳೆಯುತ್ತವೆ. ಈಗ ‘ ಐವಿ ರಿಟರ್ನ್ಸ್’ (IV Returns) ಸಿನಿಮಾ ಹೆಸರಾಂತ ತಾಂತ್ರಿಕ ಬಳಗದ ಕಾರಣದಿಂದ ಸುದ್ದಿಯಲ್ಲಿದೆ.
ದೊಡ್ಮನೆ ಕುಡಿ ಲಕ್ಕಿ ಗೋಪಾಲ್ (Lucky Gopal) ಚೊಚ್ಚಲ ಪ್ರಯತ್ನದ ಐವಿ ರಿಟರ್ನ್ಸ್ ಸಿನಿಮಾದಲ್ಲಿ ಹೆಸರಾಂತ ಟೆಕ್ನಿಷಿಯನ್ ಕೆಲಸ ಮಾಡಲಿದ್ದಾರೆ. ಹೀಗಾಗಿ ಈ ಸಿನಿಮಾ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರಲಿದೆ. ತಮಿಳಿನ ಹೆಸರಾಂತ ಸಂಗೀತ ನಿರ್ದೇಶಕ ಅಮ್ರಿಷ್ ಈ ಸಿನಿಮಾದ ಹಾಡುಗಳನ್ನು ಕಂಪೋಸ್ ಮಾಡಿದ್ದು, ರುಸ್ತುಂ, ಘೋಸ್ಟ್ ಚಿತ್ರದ ಖ್ಯಾತಿಯ ಮಹೇನ್ ಸಿಂಹ ಸಿನಿಮಾಟೋಗ್ರಫಿಯಲ್ಲಿ ಐವಿ ರಿಟರ್ನ್ಸ್ ಸಿನಿಮಾ ಮೂಡಿ ಬರಲಿದೆ.
ಸೂರಿ ಅವರ ಚಿತ್ರಗಳಿಗೆ ಕತ್ತರಿ ಪ್ರಯೋಗ ಮಾಡಿರುವ ದೀಪು ಎಸ್ ಕುಮಾರ್ ಚಿತ್ರಕ್ಕೆ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ವಿದ್ಯಾಧರಣ್ ಕಥೆ, ಮಾಸ್ತಿ ಪಂಚಿಂಗ್ ಮಾತು, ಚೇತನ್ ಡಿಸೋಜಾ ಅವರ ಸಾಹಸ ನಿರ್ದೇಶನ ಚಿತ್ರಕ್ಕೆ ಮತ್ತಷ್ಟು ರಂಗು ತುಂಬಲಿದೆ. ವೇಣುಗೋಪಾಲ್ ಅಸೋಸಿಯೇಟ್ ಡೈರೆಕ್ಟರ್ ಆಗಿ, ರೇಣುಕಾ ಪ್ರಸಾದ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ, ಮೈಸೂರು ರಮೇಶ್ ಪ್ರೊಡಕ್ಷನ್ ಮ್ಯಾನೇಜರ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.